
ಮಂಡ್ಯ: ಹಳ್ಳಿಕಾರ್ ತಳಿಯ ಸೂಜಿಮಲ್ಲಿಗೆ ಜೋಡೆತ್ತಿಗೆ ₹19 ಲಕ್ಷ, ಗುಜರಾತ್ ತಳಿಯಾದ ಪಂಚಕಲ್ಯಾಣಿ ಜಫರಾಬಾದ್ ಎಮ್ಮೆಗೆ ₹5 ಲಕ್ಷ, ಪಾಕಿಸ್ತಾನದ ಥಾರ್ ಪಾರ್ಕರ್ ರಾಸಿಗೆ ₹3 ಲಕ್ಷ, ಮಾಂಸಕ್ಕೆ ಪ್ರಸಿದ್ಧಿಯಾದ ಬಂಡೂರು ಕುರಿಗೆ ₹1.25 ಲಕ್ಷ...
ಈ ದೇಸಿ ತಳಿಗಳು ಕಂಡಬಂದಿದ್ದು ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನ ‘ಕೃಷಿ ಮೇಳ’ದಲ್ಲಿ. ನೋಡಲು ಬಹು ಆಕರ್ಷಕವಾಗಿದ್ದ ಈ ತಳಿಗಳ ಬೆಲೆ ಕೇಳಿಯೇ ರೈತರು ಮೂಗಿನ ಮೇಲೆ ಬೆರಳಿಡುವಂತಾಯಿತು.
‘ಮೂರು ವರ್ಷಗಳ ಹಿಂದೆ ₹6.5 ಲಕ್ಷಕ್ಕೆ ಹಳ್ಳಿಕಾರ್ ಸೂಜಿಮಲ್ಲಿಗೆ ಹೋರಿಗಳನ್ನು ಖರೀದಿಸಿದ್ದೆ. ಇವುಗಳನ್ನು ಮಕ್ಕಳಂತೆ ಸಾಕಿದ್ದೇನೆ. ಮುಡುಕುತೊರೆ, ಕೆಂಗಲ್ ಅಯ್ಯನಗುಡಿ ಜಾತ್ರೆ, ಬೇಬಿಬೆಟ್ಟದ ಜಾತ್ರೆಗಳಲ್ಲಿ ಪಾಲ್ಗೊಂಡು ಇದುವರೆಗೆ 40 ಗ್ರಾಂ ಚಿನ್ನವನ್ನು ಸಂಪಾದಿಸಿವೆ. ಅಷ್ಟೇ ಅಲ್ಲ, ‘ಉತ್ತಮ ರಾಸು’ ಪ್ರಶಸ್ತಿಗೂ ಪಾತ್ರವಾಗಿವೆ. ಈಗ ಇವುಗಳನ್ನು ₹19 ಲಕ್ಷಕ್ಕೆ ಕೇಳುತ್ತಿದ್ದಾರೆ’ ಎಂದು ಕನಕಪುರದ ಇಂದ್ರೇಶ್ ಹೇಳಿದರು.
‘ಹಳ್ಳಿಕಾರ್ ಕರುನಾಡಿನ ಹಿರಿಮೆ ಮತ್ತು ಗರಿಮೆ. ಹಳ್ಳಿಕಾರ್ ತಳಿ ಉಳಿವಿಗಾಗಿ ನಾವು ಶ್ರಮಿಸುತ್ತಿದ್ದೇವೆ. ನಮ್ಮಲ್ಲಿ 15 ನಾಟಿ ಹಸು 2 ಜೊತೆ ಎತ್ತುಗಳಿವೆ. ₹6 ಲಕ್ಷ ಬೆಲೆ ಬಾಳುವ ಜೋಡೆತ್ತುಗಳಿವೆ. ಸಾವಯವ ಕೃಷಿ ಪದ್ಧತಿಯಲ್ಲಿ ವಿವಿಧ ತರಹದ ಹಣ್ಣು ಬೆಳೆಯುತ್ತಿದ್ದೇವೆ’ ಎಂದು ಕೆರಗೋಡಿನ ಹಳ್ಳಿಕಾರ್ ನಿರಂಜನ್ ತಿಳಿಸಿದರು.
ಬಂಡೂರು ಕುರಿ ತಳಿ ಸಂರಕ್ಷಣೆ:
‘ಬಂಡೂರು ಕುರಿ ಎಂದು ನಂಬಿಸಿ ಬೇರೆ ತಳಿಯನ್ನು ಕೊಟ್ಟು ಕೆಲವೆಡೆ ಮೋಸ ಮಾಡಿದ್ದಾರೆ. ರೈತರು ಬಂಡೂರು ಕುರಿಯ ಸಮರ್ಪಕ ಮಾಹಿತಿ ತಿಳಿದುಕೊಳ್ಳಬೇಕು. ನಮ್ಮ ಬಳಿ 130 ಕುರಿಗಳು, 10 ಬ್ರೀಡರ್ಸ್‌ಗಳಿವೆ. 3 ವರ್ಷದ ಬಂಡೂರು ಕುರಿಗೆ ₹1.25 ಲಕ್ಷ ದರವಿದೆ. ಬಂಡೂರು ತಳಿ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ’ ಎಂದು ಎಸ್.ಐ. ಹೊನ್ನಲಗೆರೆಯ ಅಪ್ಪುಗೌಡ ತಿಳಿಸಿದರು.
ರಾಜಸ್ತಾನ ತಳಿಯಾದ ರಾಠಿ ಹಸು, ಪಾಕಿಸ್ತಾನದ ಥಾರ್‌ಪಾರ್ಕರ್ ರಾಸು, ಬೂಕನಕೆರೆಯ ಗೀರ್ ತಳಿ ಹಸು, ಆಬಲವಾಡಿಯ ಹಳ್ಳಿಕಾರ್ ಹೋರಿ, ದಕ್ಷಿಣ ಆಫ್ರಿಕಾದ ಡಾರ್ಪರ್ ಕುರಿ (₹5 ಲಕ್ಷ), ಕಿರುಗಾವಲಿನ ಬಂಡೂರು ಕುರಿ.. ಹೀಗೆ ವಿವಿಧ ತಳಿಯ ರಾಸುಗಳು ಮೈಬಣ್ಣ, ಆಕಾರ, ಗಾತ್ರದಲ್ಲಿ ವಿಶಿಷ್ಟವಾಗಿದ್ದು, ರೈತರ ಮೆಚ್ಚುಗೆಗೆ ಪಾತ್ರವಾದವು.
‘ದಿನಕ್ಕೆ 28 ಲೀಟರ್ ಹಾಲು ಕೊಡುವ ಎಮ್ಮೆ’
‘ಗುಜರಾತಿನ ಗೀರ್ ಅರಣ್ಯದಲ್ಲಿ ಹೆಚ್ಚಾಗಿ ಕಂಡುಬರುವ ತಳಿ ‘ಪಂಚಕಲ್ಯಾಣಿ ಜಫರಾಬಾದಿ ಎಮ್ಮೆ’ ನೋಡಲು ಕಡುಕಪ್ಪು ಮತ್ತು ಬೃಹದಾಕಾರವಾಗಿದೆ. ಆದರೆ ಇದರದ್ದು ಸಾಧು ಸ್ವಭಾವ. ಮಕ್ಕಳು ಕೂಡ ನೋಡಿಕೊಳ್ಳಬಹುದು. ನಿತ್ಯ 28ರಿಂದ 30 ಲೀಟರ್‌ವರೆಗೆ ಹಾಲು ಕೊಡುತ್ತದೆ. ಹಾಲು 8ರಿಂದ 8.5 ಕೊಬ್ಬಿನಂಶ ಹೊಂದಿದೆ. ಇದರ ದರ ಬರೋಬ್ಬರಿ ₹5 ಲಕ್ಷ’ ಎಂದು ಬೇಗೂರಿನ ಕೃಷ್ಣಮೂರ್ತಿ ರೈತರಿಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.