ಮೇಲುಕೋಟೆ: ವಿಶ್ವ ವಿಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಮುಮ್ಮಡಿಯವರ ಜನ್ಮವರ್ಧಂತಿಯ ಅಂಗವಾಗಿ ನಡೆಯುವ ಆಷಾಢ ಮಾಸದ ಐತಿಹಾಸಿಕ ಜಾತ್ರಾ ಮಹೋತ್ಸವವಾದ ಶ್ರೀಕೃಷ್ಣರಾಜಮುಡಿ ಬ್ರಹೋತ್ಸವಕ್ಕೆ ಆಕರ್ಷಣೀಯಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಭಕ್ತರ ಆಗ್ರಹವಾಗಿದೆ.
ಮೈಸೂರು ಮಹಾರಾಜ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಆರಂಭಿಸಿರುವ ಆಷಾಢ ಜಾತ್ರಾ ಮಹೋತ್ಸವ ಇಂದಿಗೂ ದೊರೆಯ ಹೆಸರಲ್ಲೇ ನಡೆಯುತ್ತಾ ಬಂದಿದೆ. ಮಹಾರಾಜರು ಕೃಷ್ಣರಾಜಮುಡಿ ಉತ್ಸವಕ್ಕಾಗಿ ಅಪೂರ್ವ ವಜ್ರಗಳಿಂದ ಕೂಡಿದ ಕೃಷ್ಣರಾಜಮುಡಿ ಕಿರೀಟ ರಾಜಲಾಂಛನ ಗಂಡಭೇರುಂಡ ಪದಕ ನೀಡಿದ್ದಾರೆ. ಕೃಷ್ಣರಾಜಮುಡಿ ಬ್ರಹೋತ್ಸವದಲ್ಲಿ ಕೊನೆಯ ದಿನದ ಪೂಜೆಗಾಗಿಯೇ ಕಲ್ಯಾಣಿ ಸಮುಚ್ಚಯದಲ್ಲಿ 16 ಕಂಬಗಳ ಆಕರ್ಷಕ ಭುವನೇಶ್ವರಿ ಮಂಟಪ ನಿರ್ಮಿಸಿದ್ದಲ್ಲದೆ, ದೇವಾಲಯದ ಅಭಿವೃದ್ಧಿಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ.
ಮುಮ್ಮಡಿಯವರ ಜನ್ಮವರ್ಧಂತಿಯಿಂದ ಆರಂಭವಾಗಿ ಹತ್ತು ದಿನಗಳ ಕಾಲ ಬ್ರಹೋತ್ಸವ ನಡೆಯಲಿದ್ದು, ಈ ವರ್ಷ ಜುಲೈ 12ರಿಂದ 22ರವರೆಗೆ ಆಷಾಢ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ಬಹಳ ಅದ್ದೂರಿಯಾಗಿ ರಾಜ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯುತ್ತಿದ್ದ ಶ್ರೀಕೃಷ್ಣರಾಜಮುಡಿ ಜಾತ್ರೆ ಮಹತ್ವ ಹೊಂದಿದ್ದರೂ ನೂರಾರು ವರ್ಷಗಳಿಂದ ಮುಜರಾಯಿ ಇಲಾಖೆ ಹಾಗೂ ಜನಪ್ರತಿನಿಧಿಗಳ, ಅಧಿಕಾರಿಗಳ ನಿರಾಸಕ್ತಿ ಮತ್ತು ನಿರ್ಲಕ್ಷ್ಯದಿಂದಾಗಿ ಮಹೋತ್ಸವ ಸಾಂಕೇತಿಕವಾಗಿ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ.
ಸ್ಥಗಿತಗೊಂಡ ಪ್ರಮುಖ ಉತ್ಸವಗಳು:
ಈ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ರಥೋತ್ಸವ ಮತ್ತು ತೆಪ್ಪೋತ್ಸವ ಸ್ಥಗಿತಗೊಂಡಿದೆ. ಇಷ್ಟೊಂದು ಮಹತ್ವ ಇರುವ ಬ್ರಹ್ಮೋತ್ಸವದ ಬಗ್ಗೆ ಭಕ್ತರ ಮಾಹಿತಿಗಾಗಿ ಕನಿಷ್ಠ ಡಿಜಿಟಲ್ ಆಹ್ವಾನ ಪತ್ರಿಕೆಯನ್ನೂ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಐತಿಹಾಸಿಕ ಉತ್ಸವವನ್ನು ಮೂಲೆಗುಂಪು ಮಾಡಲಾಗುತ್ತಿದೆ. ಕೃಷ್ಣರಾಜಮುಡಿ ಬ್ರಹೋತ್ಸವಕ್ಕಾಗಿ ಕನಿಷ್ಠ ವ್ಯವಸ್ಥೆಯನ್ನಾದರೂ ಮಾಡಬೇಕೆಂಬ ಒತ್ತಾಯ ಭಕ್ತರಿಂದ, ಸ್ಥಳೀಯ ನಾಗರೀಕರಿಂದ ಪ್ರತಿವರ್ಷ ಕೇಳಿಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ದೇವಾಲಯದ ಮುಂಭಾಗದ ಚಪ್ಪರ ಸಿಂಗಾರ, ರಾಜಗೋಪುರ ಮತ್ತು ರಾಜಬೀದಿಗೆ ಸರಳ ದೀಪಾಲಂಕಾರ ಮಾಡುವುದಕ್ಕೂ ಚೆಲುವನಾರಾಯಣಸ್ವಾಮಿ ಬಡವನಾಗಿದ್ದಾನೆ ಎಂಬುದು ಭಕ್ತರ ಅಳಲು.
ಲಕ್ಷಾಂತರ ರೂಪಾಯಿ ಆದಾಯ:
ಇಲ್ಲಿನ ಪಂಚಕಲ್ಯಾಣಿ, ರಾಯಗೋಪುರ, ಅಕ್ಕತಂಗಿಕೊಳ, ಧನುಷ್ಕೋಟಿ ಸೇರಿದಂತೆ ಮೇಲುಕೋಟೆಯ ಹಲವಾರು ತಾಣಗಳಲ್ಲಿ ಸಿನಿಮಾ ಚಿತ್ರೀಕರಣ, ಪ್ರೀವೆಡ್ಡಿಂಗ್ ಶೂಟ್‌ಗಳಿಂದ ನಿತ್ಯ ₹30 ರಿಂದ 40 ಸಾವಿರ ಆದಾಯ ಬರುತ್ತಿದ್ದರೂ ಅಧಿಕಾರಿ ದೇವಾಲಯ ಅಭಿವೃದ್ಧಿಗೆ, ಭಕ್ತರ ಮೂಲಸೌಕರ್ಯಕ್ಕೆ ಕಿಂಚಿತ್ತೂ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಭಕ್ತರು ದೂರಿದ್ದಾರೆ.
ಮೇಲುಕೋಟೆಯಲ್ಲಿ ವರ್ಷಕ್ಕೆ ಎರಡು ಸಲ ಮಾತ್ರ ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುವ ಸಂಪ್ರದಾಯವಿದೆ. ವೈರಮುಡಿ ಬಿಟ್ಟರೆ ಕೃಷ್ಣರಾಜಮುಡಿಯ ಪ್ರಥಮ ದಿನ ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುತ್ತದೆ. ಈ ವರ್ಷ ಈ ಸಂಭ್ರಮ ಜುಲೈ 12ರಂದು ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತವಾದ ಶನಿವಾರ ನಡೆಯುತ್ತಿದೆ. 21ರ ದ್ವಾದಶಿಯಂದೇ ತೀರ್ಥಸ್ನಾನ ನೆರವೇರುತ್ತಿದೆ. ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಜುಲೈ12ರಿಂದ 21ರವರೆಗೆ ವಿವಿಧ ಉತ್ಸವಗಳಲ್ಲಿ ಚೆಲುವನಾರಾಯಣನನ್ನು ಅಲಂಕರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.