ADVERTISEMENT

ಕೆಆರ್‌ಎಸ್‌ ಅಣೆಕಟ್ಟೆಗೆ ‘ಸ್ಕಾಡಾ ತಂತ್ರಜ್ಞಾನ’

ಶಿಥಿಲ ಗೇಟುಗಳನ್ನು ಬದಲಿಸಿ ಹೊಸ ಗೇಟುಗಳ ಅಳವಡಿಕೆ ಪೂರ್ಣ

ಸಿದ್ದು ಆರ್.ಜಿ.ಹಳ್ಳಿ
Published 21 ಆಗಸ್ಟ್ 2025, 23:38 IST
Last Updated 21 ಆಗಸ್ಟ್ 2025, 23:38 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ಹಳೆಯ ಗೇಟುಗಳನ್ನು ಬದಲಿಸಿ, ಹೊಸ ಗೇಟುಗಳನ್ನು ಅಳವಡಿಸಿರುವುದು (ಸಂಗ್ರಹ ಚಿತ್ರ)
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ಹಳೆಯ ಗೇಟುಗಳನ್ನು ಬದಲಿಸಿ, ಹೊಸ ಗೇಟುಗಳನ್ನು ಅಳವಡಿಸಿರುವುದು (ಸಂಗ್ರಹ ಚಿತ್ರ)   

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಶಿಥಿಲವಾಗಿದ್ದ ಗೇಟುಗಳನ್ನು ಬದಲಿಸಿ, ಹೊಸ ಗೇಟುಗಳನ್ನು ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗೇಟುಗಳ ನಿರ್ವಹಣೆಗೆ ಆಧುನಿಕವಾದ ‘ಸ್ಕಾಡಾ ತಂತ್ರಜ್ಞಾನ’ ಅಳವಡಿಸಿಕೊಳ್ಳಲಾಗಿದೆ. 

‘ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ ವ್ಯವಸ್ಥೆಯೇ ಸ್ಕಾಡಾ’ (SCADA). ರಿಮೋಟ್‌ ತಂತ್ರಜ್ಞಾನದ ಮೂಲಕ ನೀರು ಪೋಲಾಗುವುದನ್ನು ತಡೆಗಟ್ಟುವುದು ಮತ್ತು ವೈಜ್ಞಾನಿಕವಾಗಿ ನೀರಿನ ಹಂಚಿಕೆಯೇ ಪ್ರಮುಖ ಉದ್ದೇಶ.  

‘ಮೊದಲು ಪ್ರತಿ ಗೇಟನ್ನು ಸಿಬ್ಬಂದಿಯೇ ನಿರ್ವಹಿಸಬೇಕಿತ್ತು. ಹೊಸ ತಂತ್ರಜ್ಞಾನದಿಂದ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಎಲ್ಲ ಗೇಟುಗಳನ್ನು ಸ್ವಯಂಚಾಲಿತವಾಗಿ ಏರಿಳಿಸಲಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಗೇಟುಗಳನ್ನು ತುರ್ತಾಗಿ ತೆರೆಯಬಹುದು’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು. 

ADVERTISEMENT

ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಅಳವಡಿಕೆ ಪೂರ್ಣಗೊಂಡಿದ್ದು, ಯಶಸ್ವಿಯಾಗಿ ಚಾಲನೆ ಮಾಡಲಾಗುತ್ತಿದೆ. ‘ಕಂಟ್ರೋಲ್‌ ರೂಂ’ ನಿರ್ಮಾಣ ಕಾರ್ಯ ಇನ್ನು 2–3 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 

ಗೇಟುಗಳ ಆಧುನೀಕರಣ

1932ರಲ್ಲಿ ನಿರ್ಮಾಣವಾದ ಅಣೆಕಟ್ಟೆಯು ಶತಮಾನದ ಹೊಸ್ತಿಲಲ್ಲಿದ್ದು, ಗೇಟುಗಳು 80 ವರ್ಷಗಳಷ್ಟು ಹಳೆಯದಾದ್ದರಿಂದ, ಶಿಥಿಲಗೊಂಡು ನೀರು ಸೋರಿಕೆಯಾಗುತ್ತಿತ್ತು. ಹೀಗಾಗಿ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.

2011ರಲ್ಲಿ +80 ಅಡಿ ಮಟ್ಟದ 16 ಹೊಸ ಗೇಟುಗಳನ್ನು ₹8.50 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿತ್ತು. 2013–14ರಲ್ಲಿ ನೀರಾವರಿಗೆ ಸಂಬಂಧಿಸಿದ ವಿಶ್ವೇಶ್ವರಯ್ಯ ಕಾಲುವೆಗಳ +60 ಅಡಿ ಮಟ್ಟದ 3 ಗೇಟು, +50 ಅಡಿ ಮಟ್ಟದ 3 ಗೇಟುಗಳನ್ನು ₹2.70 ಕೋಟಿ ವೆಚ್ಚದಲ್ಲಿ ಬದಲಿಸಲಾಗಿತ್ತು. 

ಪ್ರವಾಹ ಬಂದಾಗ ಉಪಯೋಗಿಸುವಂತಹ ನದಿ ಪಾತ್ರದ ದಕ್ಷಿಣ ಭಾಗದಲ್ಲಿರುವ +103 ಅಡಿ ಮಟ್ಟದ 48 ಗೇಟುಗಳು, +106 ಅಡಿ ಮಟ್ಟದ 40 ಗೇಟುಗಳು ಹಾಗೂ +114 ಅಡಿ ಮಟ್ಟದ 48 ಗೇಟುಗಳನ್ನು ₹65.60 ಕೋಟಿ ವೆಚ್ಚದಲ್ಲಿ ಹೊಸದಾಗಿ ಅಳವಡಿಸಲು 2019ರಲ್ಲಿ ಆಧುನೀಕರಣ ಕಾಮಗಾರಿ ಆರಂಭವಾಗಿ, ಇತ್ತೀಚೆಗೆ ಪೂರ್ಣಗೊಂಡಿದೆ. 

ಶಾಶ್ವತವಾಗಿ ಮುಚ್ಚಿದ ಗೇಟು

‘ನಾಲ್ಕು ಟರ್ಬೈನ್‌ ಗೇಟುಗಳು +53 ಅಡಿ ಎತ್ತರದಲ್ಲಿದ್ದು, ವಿದ್ಯುತ್‌ ಉತ್ಪಾದನೆ ಸಾಧ್ಯವಿಲ್ಲವೆಂಬುದನ್ನು ಪರಿಗಣಿಸಿ, ನಿರ್ಮಾಣ ಕಾಲದಲ್ಲೇ ಶಾಶ್ವತವಾಗಿ ಮುಚ್ಚಲಾಗಿದೆ. ಹೂಳು ತೆಗೆಯಲು ನಿರ್ಮಿಸಿದ್ದ +12 ಅಡಿ ಮಟ್ಟದ 8 ಗೇಟುಗಳನ್ನೂ ತಾಂತ್ರಿಕ ಕಾರಣದಿಂದ ಮುಚ್ಚಲಾಗಿದೆ. ಅದನ್ನು ಸರಿದೂಗಿಸಲು +60 ಅಡಿ ಮಟ್ಟದಲ್ಲಿರುವ ವರುಣ ನಾಲೆಯ ಕ್ರಾಸ್‌ ರೆಗ್ಯುಲೇಟರ್‌ ಮೂಲಕ ನೀರನ್ನು ಹರಿಸಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. 

ಶಿಥಿಲವಾಗಿದ್ದ ಹಳೆಯ ಗೇಟು

ಹೊಸ ಗೇಟುಗಳನ್ನು ಅಳವಡಿಸುವ ಮೂಲಕ ಕೆಆರ್‌ಎಸ್‌ ಅಣೆಕಟ್ಟೆಯನ್ನು ಬಲಪಡಿಸಿದ್ದೇವೆ. ಅನುದಾನ ಲಭ್ಯತೆ ಆಧಾರದಲ್ಲಿ ಪ್ರತಿ ವರ್ಷ ಅಗತ್ಯ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದೇವೆ

–ವಿ.ಜಯಂತ್‌ ಕಾರ್ಯಪಾಲಕ ಎಂಜಿನಿಯರ್‌ ಕಾವೇರಿ ನೀರಾವರಿ ನಿಗಮ

ಕಂಬ ಬಲಪಡಿಸಲು ₹10 ಕೋಟಿಗೆ ಬೇಡಿಕೆ

‘ಆರ್‌ಬಿಎಲ್‌ಎಲ್‌ ಕಾಲುವೆ ಗೇಟುಗಳನ್ನು ಆಧುನೀಕರಣಗೊಳಿಸಲು ಅಗತ್ಯವಿರುವ ₹2.50 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಇದರಿಂದ 50 ಕ್ಯೂಸೆಕ್‌ ಸೋರಿಕೆಯ ನೀರನ್ನು ತಡೆಯಬಹುದಾಗಿದೆ. ಕೆಆರ್‌ಎಸ್‌ ಡ್ಯಾಂ ಗೇಟುಗಳ ಅಕ್ಕಪಕ್ಕದಲ್ಲಿರುವ ಕಂಬಗಳನ್ನು ಬಲಪಡಿಸುವ ಕಾಮಗಾರಿ ಕೈಗೊಳ್ಳಲು ₹10 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ನಿಗಮದ ಎಂಜಿನಿಯರ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.