ADVERTISEMENT

ಕೆಆರ್‌ಎಸ್‌ ಜಲಾಶಯ: 89.32 ಅಡಿಗೆ ಕುಸಿದ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 20 ಮೇ 2025, 20:06 IST
Last Updated 20 ಮೇ 2025, 20:06 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಲ್ಲಿ ಮಂಗಳವಾರ ನೀರಿನ ಮಟ್ಟ 89.32 ಅಡಿಗೆ ಕುಸಿದಾಗ ಕಂಡ ದೃಶ್ಯ
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಲ್ಲಿ ಮಂಗಳವಾರ ನೀರಿನ ಮಟ್ಟ 89.32 ಅಡಿಗೆ ಕುಸಿದಾಗ ಕಂಡ ದೃಶ್ಯ   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಮಂಗಳವಾರ 89.32 ಅಡಿಗೆ ಕುಸಿದಿದೆ. 

ಜಲಾಶಯದ ಮಟ್ಟ 60 ಅಡಿ ತಲುಪುವವರೆಗೆ ಕುಡಿಯುವ ಉದ್ದೇಶಕ್ಕೆ ನೀರನ್ನು ಬಳಸಬಹುದು. ಉಳಿದ ನೀರನ್ನು ‘ಡೆಡ್‌ ಸ್ಟೋರೇಜ್‌’ ಎಂದು ಪರಿಗಣಿಸಲಾಗುತ್ತದೆ. ಈಗ ಲಭ್ಯವಿರುವ ನೀರನ್ನು ಎರಡು ತಿಂಗಳಿಗೂ ಹೆಚ್ಚು ಕಾಲ ಕುಡಿಯುವ ಉದ್ದೇಶಕ್ಕೆ ಬಳಸಬಹುದು.

ಮಡಿಕೇರಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ.ಈ ಬಾರಿ ಮುಂಗಾರು ಉತ್ತಮವಾಗಿರುವ ಕಾರಣ ನೀರಿನ ಕೊರತೆ ಕಾಡುವುದಿಲ್ಲ ಎಂಬ ಆಶಾಭಾವನೆ ಅಧಿಕಾರಿಗಳದ್ದು.

ADVERTISEMENT

ಜಲಾಶಯಕ್ಕೆ ಪ್ರಸ್ತುತ 148 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. 549 ಕ್ಯುಸೆಕ್‌ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರಗೆ ಬಿಡಲಾಗುತ್ತಿದೆ. 124.80 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 15.53 ಟಿಎಂಸಿ ಅಡಿ (ಗರಿಷ್ಠ 49.5 ಟಿಎಂಸಿ) ನೀರಿನ ಸಂಗ್ರಹವಿದೆ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 80.72 ಅಡಿ (11.1 ಟಿಎಂಸಿ ಅಡಿ) ನೀರಿನ ಸಂಗ್ರಹವಿತ್ತು. 1416 ಕ್ಯುಸೆಕ್‌ ಒಳ ಹರಿವು ಹಾಗೂ 270 ಕ್ಯುಸೆಕ್ ಹೊರ ಹರಿವು ದಾಖಲಾಗಿತ್ತು.

ನಾಲೆಗೆ ನೀರು ನಿಲುಗಡೆ

ರೈತ ಸಂಘದ ಒತ್ತಾಯದ ಮೇರೆಗೆ ಮೇ 11ರಿಂದ ನಾಲೆಗೆ ನೀರು ಹರಿಸಲಾಗುತ್ತಿತ್ತು. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿಸುತ್ತಿದ್ದ ನೀರನ್ನು ಸೋಮವಾರದಿಂದ ನಿಲ್ಲಿಸಲಾಗಿದೆ. ಮತ್ತೆ ನಾಲೆಗೆ ನೀರು ಹರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.