ಪ್ರಜಾವಾಣಿ ವಾರ್ತೆ
ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಸಮೀಪ ನಿರ್ಮಾಣವಾಗಿರುವ ಕೆಳಸೇತುವೆಯಲ್ಲಿ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರಜಾತಂತ್ರ ವ್ಯವಸ್ಥೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯಬೇಕು. ಆದರೆ ರಾಜ್ಯಸರ್ಕಾರದ ದುರಾಡಳಿತ ನೋಡಿದರೆ ಜನರಿಂದ ಕಾಂಗ್ರೆಸ್‌ಗಾಗಿ ಹಾಗೂ ರಾಹುಲ್ ಗಾಂಧಿಗೋಸ್ಕರ ಎಂಬಂತೆ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಕಿಡಿಕಾರಿದರು.
ರೈತರು ಹಾಗೂ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅದನ್ನು ರಾಹುಲ್‌ಗಾಂಧಿಗೆ ಕಪ್ಪ ಒಪ್ಪಿಸುತ್ತಿರಬಹುದು. ಇದು ಕೊನೆಯ ಎಚ್ಚರಿಕೆ. ಶೀಘ್ರದಲ್ಲಿಯೇ ಟೋಲ್ ಸಂಗ್ರಹ ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನುಬಾಹಿರವಾಗಿ ನಡೆಯುತ್ತಿರುವ ಟೋಲ್ ಅನ್ನೇ ಕಿತ್ತಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಹುಶಃ ಟೋಲ್ ನಿರ್ವಹಣೆ ಮಾಡುತ್ತಿರುವವರು ಜನಪ್ರತಿನಿಧಿಗಳ ಸಂಬಂಧಿಕರಿರಬೇಕು. ಆ ಕಾರಣಕ್ಕೆ ವಸೂಲಾತಿ ಮುಂದುವರಿಯುತ್ತಿದೆ. ಈಗಾಗಲೇ ವೆಚ್ಚದ ಹಣ ವಸೂಲಾಗಿರುವುದರಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವಂತೆ 2023ರಲ್ಲಿ ನಿಗಮದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಸ್ಪಂದನೆ ಸಿಕ್ಕಿಲ್ಲ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ತೋರಿಸುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಮುಖಂಡರಾದ ದರ್ಶನ್, ಹನಿಯಂಬಾಡಿ ನಾಗರಾಜು, ಸಿದ್ದಪ್ಪ, ತಿಮ್ಮೇಗೌಡ, ಮಹೇಶ್, ಪರಮೇಶ್, ಜಗದೀಶ್, ಸುರೇಶ್, ರಮೇಶ್ ಭಾಗವಹಿಸಿದ್ದರು.
Highlights - ರಾಹುಲ್ ಗಾಂಧಿಗೆ ಕಪ್ಪ: ಆರೋಪ ಟೋಲ್ ಗುತ್ತಿಗೆದಾರರು ರಾಜಕಾರಣಿಗಳಾ ಸಂಬಂಧಿಕರಾ? ಟೋಲ್ ಬೂತ್ ಕಿತ್ತು ಹಾಕುವುದಾಗಿ ಎಚ್ಚರಿಕೆ
Cut-off box - ‘₹20 ಕೋಟಿ ಟೋಲ್ ಸಂಗ್ರಹ’ ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಮಾತನಾಡಿ 2002 ರಲ್ಲಿ ₹17 ಕೋಟಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣ ಮಾಡಲಾಗಿದೆ. ಈವರೆಗೆ ಟೋಲ್‌ನಲ್ಲಿ ಅಂದಾಜು ₹20 ಕೋಟಿ ಹಣ ಸಂಗ್ರಹಿಸಲಾಗಿದೆ. ಹೀಗಿದ್ದರೂ ಸುಂಕ ವಸೂಲಾತಿ ನಿಲ್ಲಿಸಿಲ್ಲ. ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಚಿವರು ದುರಂಹಕಾರ ಬಿಟ್ಟು ಕಾನೂನು ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದರೆ ಬೀದಿ ಬೀದಿಯಲ್ಲಿ ಘೇರಾವ್ ಹಾಕಬೇಕಾಗುತ್ತದೆ. ಪ್ರತಿದಿನ ಅಂದಾಜು ₹5 ಲಕ್ಷ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಖರ್ಚು ಮಾಡಿದ ವೆಚ್ಚ ಸಂಗ್ರಹವಾದರೂ ಯಾವ ಕಾರಣಕ್ಕೆ ಸುಂಕ ವಸೂಲಾತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.