ADVERTISEMENT

ಕೃಷಿಗೆ ಮಾರುಹೋದ ನಿವೃತ್ತ ಪ್ರಾಚಾರ್ಯ

ಜಪಾನ್‌ನ ಫುಕುವೊಕಾ ಪದ್ಧತಿಯ ಪ್ರಯೋಗಿಸಿ ಯಶಸ್ವಿ, 20 ಬಗೆಯ ಬೆಳೆಗಳು

ಗಣಂಗೂರು ನಂಜೇಗೌಡ
Published 13 ಜೂನ್ 2019, 20:10 IST
Last Updated 13 ಜೂನ್ 2019, 20:10 IST
ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡೇಗೌಡನಕೊಪ್ಪಲು ಗ್ರಾಮದ ತಮ್ಮ ತೋಟದಲ್ಲಿ ಎರೆಹುಳು ಗೊಬ್ಬರ ಘಟಕದ ಜತೆ ಡಾ.ನಾಗರಾಜು
ಶ್ರೀರಂಗಪಟ್ಟಣ ತಾಲ್ಲೂಕು ದೊಡ್ಡೇಗೌಡನಕೊಪ್ಪಲು ಗ್ರಾಮದ ತಮ್ಮ ತೋಟದಲ್ಲಿ ಎರೆಹುಳು ಗೊಬ್ಬರ ಘಟಕದ ಜತೆ ಡಾ.ನಾಗರಾಜು   

ಶ್ರೀರಂಗಪಟ್ಟಣ: ಕೃಷಿ ನಷ್ಟದ ಕಸುಬು ಎಂದು ಅದಕ್ಕೆ ಬೆನ್ನು ಹಾಕುವವರೇ ಹೆಚ್ಚು. ಇದಕ್ಕೆ ಅಪವಾದ ಎಂಬಂತೆ ನಿವೃತ್ತ ಪ್ರಾಚಾರ್ಯರೊಬ್ಬರು ಕೃಷಿಯನ್ನು ಅಪ್ಪಿಕೊಂಡು ಬಗೆ ಬಗೆಯ ಬೆಳೆ ಪ್ರಯೋಗಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಡಾ.ನಾಗರಾಜು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ 20ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜಪಾನ್‌ನಲ್ಲಿ ಶೂನ್ಯ ಕೃಷಿ ಎಂದೇ ಜನಜನಿತವಾಗಿರುವ ಫುಕುವೊಕಾ ಪದ್ಧತಿಯ ಪ್ರಯೋಗ ನಡೆಸುತ್ತಿದ್ದಾರೆ. ಸಿಟ್ರಸ್ ಜಾತಿಯ ಗಿಡಗಳನ್ನು ಈ ಪದ್ಧತಿಯಲ್ಲಿ ಬೆಳೆಯುತ್ತಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಡಾ.ನಾಗರಾಜು ಅವರ ತೋಟದಲ್ಲಿ 180 ತೆಂಗು, 150 ಅಡಿಕೆ, 50 ಕಾಳು ಮೆಣಸು, 15 ಮಾವು, 80 ಸಪೋಟ, 10 ಹಲಸಿನ ಮರಗಳಿವೆ. 350 ತೇಗದ ಮರಗಳು ದಷ್ಟಪುಷ್ಟವಾಗಿ ಬೆಳೆಯುತ್ತಿವೆ. ದಾಳಿಂಬೆ, ಜಂಬುನೇರಳೆ, ಚಕೋತ, ನಿಂಬೆ, ಇರಳಿ(ಹೇರಳೆ), ಸೀತಾಫಲ, ರಾಮಫಲ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಲಕ್ಷ್ಮಣ ಫಲ, ಬಾಳೆ, ನೆಲ್ಲಿ, ಸೀಬೆ, ವೀಳ್ಯದೆಲೆ, ಕೊಂಬ್ರಾಕ್ಷಿ (ಸ್ಟಾರ್ ಫ್ರೂಟ್), ಕಿತ್ತಳೆ, ಬಟರ್ ಫ್ರೂಟ್, ಅಂಜೂರ, ಬಿಲ್ವ ಪತ್ರೆ ಗಿಡಗಳನ್ನೂ ಇಲ್ಲಿ ಬೆಳೆಯಲಾಗಿದೆ. ಪ್ರಾಯೋಗಿಕವಾಗಿ 10 ಕಾಫಿ ಗಿಡಗಳನ್ನು ನೆಟಿದ್ದು, ಫಲಕ್ಕೆ ಬಂದಿವೆ.

ADVERTISEMENT

ತೇಗದ ಗಿಡಗಳು ಹತ್ತು ವರ್ಷ ಕಳೆದರೆ ಕೋಟಿಗೂ ಹೆಚ್ಚು ಹಣ ತರಲಿವೆ. ಮಾವು, ಸಪೋಟ, ತೆಂಗು, ಬಾಳೆಯಿಂದ ಸದ್ಯ ಆದಾಯ ಬರುತ್ತಿದೆ. ತೋಟದ ಬೆಳೆಗಳಿಂದ ಡಾ.ನಾಗರಾಜು ಪ್ರತಿ ವರ್ಷ ₹2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇನ್ನೂ 5 ವರ್ಷ ಕಳೆದರೆ ಆದಾಯ ದುಪ್ಪಟ್ಟಾಗಲಿದೆ ಎಂಬುದು ಅವರ ವಿಶ್ವಾಸ.

‘ನನಗೆ ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ಪ್ರೀತಿ ಇತ್ತು. ಮೇಷ್ಟ್ರು ಕೆಲಸದಿಂದ ನಿವೃತ್ತನಾದ ಮೇಲೆ ಇದರಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ. ಪಿತ್ರಾರ್ಜಿತವಾಗಿ ಬಂದ ಜಮೀನನ್ನು ಸುಸ್ಥಿರ ಕೃಷಿ ಪದ್ಧತಿಯ ತೋಟವನ್ನಾಗಿ ಅಭಿವೃದ್ಧಿ ಮಾಡಿದ್ದೇನೆ. ಕೃಷಿ ತಜ್ಞರ ಸಲಹೆ ಪಡೆದು ರೈತರಿಗೆ ಪ್ರೇರಣೆಯಾಗಬಲ್ಲ ಹಾಗೂ ನಿರಂತರ ಆದಾಯ ತರುವ ಮಾದರಿ ತೋಟವನ್ನಾಗಿ ರೂಪಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಡಾ.ನಾಗರಾಜು ಹೇಳುತ್ತಾರೆ.

ಅವರ ಸಂಪರ್ಕ ಸಂಖ್ಯೆ 9448465884.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.