ADVERTISEMENT

ಬೆಳಕವಾಡಿ: ಕುಂದೂರಮ್ಮನ ಚಿನ್ನದ ಮೂರ್ತಿ ಪಲ್ಲಕ್ಕಿ ಉತ್ಸವ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:34 IST
Last Updated 6 ನವೆಂಬರ್ 2025, 5:34 IST
ಬೆಳಕವಾಡಿ ಸಮೀಪದ ಕುಂದೂರು ಗ್ರಾಮದಲ್ಲಿ ಕುಂದೂರಮ್ಮನ ಚಿನ್ನದ ಮೂರ್ತಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.
ಬೆಳಕವಾಡಿ ಸಮೀಪದ ಕುಂದೂರು ಗ್ರಾಮದಲ್ಲಿ ಕುಂದೂರಮ್ಮನ ಚಿನ್ನದ ಮೂರ್ತಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.   

ಬೆಳಕವಾಡಿ: ಸಮೀಪದ ಕುಂದೂರು ಗ್ರಾಮ ದೇವತೆ ಕುಂದೂರಮ್ಮನ ಹಬ್ಬ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಚಿನ್ನದ ಮೂರ್ತಿಯ ಪಲ್ಲಕ್ಕಿ ಉತ್ಸವ, ಮೆರವಣಿಗೆ ಹಾಗೂ ವಿಶೇಷ ಪೂಜೆ ಕೈಂಕರ್ಯಗಳು ನಡೆದವು.

ಮಂಗಳವಾರ ಬೆಳಿಗ್ಗೆ ಬೆಟ್ಟದ ತಪ್ಪಲಿನ ದೇವಸ್ಥಾನದಲ್ಲಿರುವ ಕುಂದೂರಮ್ಮ ದೇವಿಗೆ ಅಭಿಷೇಕ, ಪುಷ್ಪಲಂಕಾರ, ಅರಿಸಿನ–ಕುಂಕುಮ ಅರ್ಚನೆ, ನೈವೇದ್ಯ, ಧೂಪದೀಪ, ಮಹಾಮಂಗಳಾರತಿಯನ್ನು ಅರ್ಚಕರು ನೆರವೇರಿಸಿದರು.

ರಾತ್ರಿ 10ಕ್ಕೆ ಶಿರಮಹಳ್ಳಿ ಗ್ರಾಮದವರು ಹೆಬ್ಬರೆಯೊಂದಿಗೆ ಕುಂದೂರಿಗೆ ಆಗಮಿಸಿದಾಗ ಜವರಹಟ್ಟಿ ಬಳಿ ದೇವಿಯ ಚಿನ್ನದ ಮೂರ್ತಿಯನ್ನು ಕನ್ನೆಕರಡಿ ಹೂವಿನ ಕುಕ್ಕೆಯಲ್ಲಿಟ್ಟು ಆಡಿಸಿದರು. ನಂತರ ವೀರಭದ್ರಸ್ವಾಮಿ ದೇವಸ್ಥಾನದಿಂದ ದೇವಿಯ ಚಿನ್ನದ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಇಟ್ಟು ಛತ್ರಿ, ಚಾಮರ, ಪಂಜು, ಹೂವು, ಹೊಂಬಾಳೆಗಳಿಂದ ಅಲಂಕರಿಸಿ ಪಲ್ಲಕ್ಕಿ ಉತ್ಸವವನ್ನು ಹೆಬ್ಬರೆ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುಂದೂರು ಬೆಟ್ಟದ ಮೂಲ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು.

ADVERTISEMENT

ಬುಧವಾರ ಬೆಳಿಗ್ಗೆ ದೇವಿಯ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಹೊರಟು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಭಕ್ತರು ಹಣ್ಣು, ಕಾಯಿ ಕೊಟ್ಟು ಪೂಜೆ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ವಾದ್ಯ ಸದ್ದಿಗೆ ಯುವಕರು ನೃತ್ಯ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬೆಳಕವಾಡಿ ಸಮೀಪದ ಕುಂದೂರಮ್ಮನ ಬೆಟ್ಟದ ಮೂಲ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದ ಭಕ್ತ ಸಮೂಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.