ಮಂಡ್ಯ: ಜನ– ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಧಾರವಾಗಿರುವ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವ ಜೀವನಾಡಿ ಕೆರೆಗಳಿಗೂ ಒತ್ತುವರಿ ಕಾಟ ತಪ್ಪಿಲ್ಲ. ಜಿಲ್ಲೆಯಲ್ಲಿ ಬರೋಬ್ಬರಿ 203 ಕೆರೆಗಳು ಒತ್ತುವರಿಯಾಗಿವೆ.
ಕೆರೆಯ ಸುತ್ತಲೂ ಇರುವ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು, ಬೆಳೆ ಬೆಳೆಯುವ ಜೊತೆಗೆ ತಮ್ಮದೇ ಜಮೀನು ಎನ್ನುವಂತೆ ಕೆಲವು ಕಡೆ ತಂತಿಬೇಲಿ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ಕೆರೆಯ ತಗ್ಗಿನ ಭಾಗಕ್ಕೆ ಮಣ್ಣು ತುಂಬಿ, ಜಮೀನನ್ನು ಸಮತಟ್ಟು ಮಾಡಿಕೊಂಡಿರುವುದು ಜಿಲ್ಲೆಯ ವಿವಿಧೆಡೆ ಕಂಡು ಬಂದಿದೆ.
ಕೆಲವರು ಕೆರೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ಹುನ್ನಾರ ನಡೆಸಿದ್ದಾರೆ. ಒಟ್ಟಾರೆ ಕೆರೆಗಳ ಒತ್ತುವರಿಯಿಂದ ವಿಸ್ತೀರ್ಣ ಕಡಿಮೆಯಾಗಿ, ನೀರು ಸಂಗ್ರಹಣಾ ಸಾಮರ್ಥ್ಯ ಇಳಿಕೆಯಾಗುತ್ತಿದೆ. ಇದು ಕೃಷಿ ಚಟುವಟಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 418 ಕೆರೆಗಳಿದ್ದು, ಅವುಗಳಲ್ಲಿ 69 ಕೆರೆಗಳು ಒತ್ತುವರಿಯಾಗಿವೆ. ಹೇಮಾವತಿ ವ್ಯಾಪ್ತಿಯಲ್ಲಿ 327 ಕೆರೆಗಳಿದ್ದು, ಇವುಗಳಲ್ಲಿ 78 ಕೆರೆಗಳು ಅತಿಕ್ರಮಣಗೊಂಡಿವೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 169 ಕೆರೆಗಳಿದ್ದು, ಇವುಗಳಲ್ಲಿ 54 ಕೆರೆಗಳು ಒತ್ತುವರಿಯಾಗಿವೆ.
₹120 ಕೋಟಿಗೆ ಪ್ರಸ್ತಾವ
‘ಜಿಲ್ಲೆಯಲ್ಲಿ ಒಟ್ಟು 962 ಕೆರೆಗಳಿದ್ದು, ಈಗಾಗಲೇ ಎಲ್ಲ ಕೆರೆಗಳ ಸರ್ವೆ ಕಾರ್ಯ (ಅಳತೆ) ಪೂರ್ಣಗೊಂಡಿದೆ. ಈ ಪೈಕಿ 448 ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಿತ್ತು. ಇದರಲ್ಲಿ 245 ಕೆರೆಗಳ ಒತ್ತುವರಿಯನ್ನು ಇತ್ತೀಚೆಗೆ ತೆರವುಗೊಳಿಸಿ, ಕೆರೆಯ ಗಡಿಭಾಗದಲ್ಲಿ ಟ್ರಂಚ್ ತೆಗೆಯಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.
ಕೆರೆಗಳ ಸುತ್ತ ತಂತಿಬೇಲಿ ಹಾಕುವುದಕ್ಕೆ ಅಧಿಕಾರಿಗಳು ಅಂದಾಜುಪಟ್ಟಿ ತಯಾರಿಸಿ ₹120 ಕೋಟಿ ಅನುದಾನದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಸರ್ಕಾರ ಇಷ್ಟೊಂದು ಹಣ ಬಿಡುಗಡೆ ಕಷ್ಟ ಎನ್ನುತ್ತವೆ ಇಲಾಖೆ ಮೂಲಗಳು.
ಸಚಿವರಿಂದ ತರಾಟೆ
‘ಜಿಲ್ಲೆಯಲ್ಲಿ ಗುರುತಿಸಿರುವ ಕೆರೆ ಒತ್ತುವರಿ ತೆರವುಗೊಳಿಸಲು ಸಮಸ್ಯೆ ಏನಿದೆ? ಇಲ್ಲಿವರೆಗೆ ಕೇವಲ 240 ಕೆರೆಗಳ ಒತ್ತುವರಿ ತೆರವು ಮಾಡಿರುವುದು ಸಾಕೇ? ಉಳಿದ ಕೆರೆಗಳ ಒತ್ತುವರಿಯನ್ನು ಯಾವಾಗ ತೆರವುಗೊಳಿಸುವಿರಿ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು 2 ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
‘ಒತ್ತುವರಿ ತೆರವುಗೊಳಿಸಿದ ಬಳಿಕ ಟ್ರಂಚ್ ಹೊಡೆಸಿ ನಾಮಫಲಕ ಹಾಕಿ. ಮತ್ತೆ ಒತ್ತುವರಿ ಮಾಡಿಕೊಂಡರೆ ಕೆರೆ ಯಾವ ಇಲಾಖೆಗೆ ಸೇರುತ್ತದೆಯೋ ಆ ಇಲಾಖೆಯವರು ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಸಚಿವರು ಖಡಕ್ ಸೂಚನೆ ನೀಡಿದ್ದರು.
‘ಮಳೆಯಾಶ್ರಿತ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವುದರಿಂದ ನೀರು ಸಂಗ್ರಹ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಇದರಿಂದ ರೈತರ ಕೊಳವೆಬಾವಿಗಳು ಬತ್ತಿ, ಕೃಷಿ ಚಟುವಟಿಕೆಗೆ ನೀರಿನ ಕೊರತೆಯಾಗುತ್ತದೆ. ಆದ್ದರಿಂದ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎನ್ನುತ್ತಾರೆ ರೈತ ಮುಖಂಡರಾದ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಾಗಿಮುದ್ದನಹಳ್ಳಿ ನಾಗೇಶ್.
––––
ಒತ್ತುವರಿ ತೆರವಿಗೆ 2 ತಿಂಗಳ ಗಡುವು
‘ರಾಜ್ಯದಲ್ಲಿ ಬಾಕಿ ಇರುವ 10710 ಕೆರೆಗಳ ವಿಸ್ತೀರ್ಣ ಸರ್ವೆ ಕಾರ್ಯವನ್ನು 2 ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಕೆರೆ ಅಂಗಳಗಳನ್ನು ಒತ್ತುವರಿ ಮಾಡಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಒತ್ತುವರಿಯನ್ನು ತೆರವುಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ನಿವಾಸ ‘ಕಾವೇರಿ’ಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
–––
ಇಲಾಖೆಯಿಂದ ₹40 ಲಕ್ಷ ಅನುದಾನ ಬಂದಿದ್ದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಾಕಿ 69 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಟ್ರಂಚ್ ತೆಗೆಸಲು ಶೀಘ್ರ ಕ್ರಮ ಕೈಗೊಳ್ಳುತ್ತೇವೆ
–ಶಿವಚಂದ್ ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ ಮಂಡ್ಯ
ಕೆಲವು ಕಡೆ ಕೆರೆಗಳನ್ನು ಅಳತೆ ಮಾಡಿ ಒತ್ತುವರಿ ತೆರವುಗೊಳಿಸಿಲ್ಲ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕೂಡಲೇ ಒತ್ತುವರಿ ತೆರವುಗೊಳಿಸಿ ಟ್ರಂಚ್ ತೆಗಿಸಲು ಕಾರ್ಯೋನ್ಮುಖರಾಗಬೇಕು
– ಕೆ.ಬೋರಯ್ಯ ಪ್ರಧಾನ ಕಾರ್ಯದರ್ಶಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.