ಮೇಲುಕೋಟೆ: ‘ಕಂದಾಯ ಇಲಾಖೆಯ ಸೇವೆಗಳು ಜನರಿಗೆ ಸಮರ್ಪಕವಾಗಿ ನಿಗದಿತ ಸಮಯಕ್ಕೆ ಜನರ ಮನೆ ಬಾಗಿಲಿಗೆ ದೊರೆಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ಪೌತಿ ಖಾತೆ ಆಂದೋಲನ ಹಾಗೂ ಹಕ್ಕು ಪತ್ರವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಬುಧವಾರ ನಡೆದ ಕಂದಾಯ ಗ್ರಾಮದ ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ‘ಕಂದಾಯ ಗ್ರಾಮವಾದ ರಾಗಿಮುದ್ದನಹಳ್ಳಿಯಲ್ಲಿ 567 ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಶೀಘ್ರ ಜನರಿಗೆ ತಲುಪಿಸಲು ತಿಂಗಳಿಗೊಮ್ಮೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಾರ್ಯಕ್ರಮ ರೂಪಿಸಿ ಸರ್ಕಾರಿ ಕೆಲಸಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.
‘ಸರ್ಕಾರ ಕಾರ್ಯಕ್ರಮಗಳಿಗೆ ಜನಸ್ಪಂದನೆ ಬಹುಮುಖ್ಯ. ದಾಖಲೆಗಳ ಸಮೇತ ಸರಿಯಾದ ಸಮಯಕ್ಕೆ ಅಧಿಕಾರಿಗಳಿಗೆ ನೀಡಿ ಕೆಲಸ ಮಾಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ತಹಶೀಲ್ದಾರ್ ಸಂತೋಷ್ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಉಳಿದಿರುವ ರೈತರು, ಬಡವರ ಕೆಲಸಗಳಿಗೆ ಶೀಘ್ರ ಮುಕ್ತಿ ನೀಡುವಂತೆ ಶಾಸಕರು ಸೂಚಿಸಿದ್ದಾರೆ. ತಮ್ಮ ಮನೆಯ, ಜಮೀನಿನ ಯಾವುದೇ ಕೆಲಸ ಕಾರ್ಯಗಳಿಗೆ ಇಲಾಖೆ ಅಧಿಕಾರಿಗಳು ಸಂಪರ್ಕಿಸಿ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಉಪಾಧ್ಯಕ್ಷೆ ರಾಧಾ, ಸದಸ್ಯರಾದ ರಾಜೇಗೌಡ, ಸ್ವಾಮಿ, ಮುಖಂಡರಾದ ಶ್ಯಾಮ್, ರಾಸ ಹನುಮಂತೇಗೌಡ್ರು, ಮಹೇಶ್, ಮಂಜುನಾಥ್ ಪಿಡಿಒ ರಮೇಶ್ ಪಾಲ್ಗೊಂಡಿದರು.
ಗ್ರಾಮಸ್ಥರಿಂದ ಶಾಸಕರಿಗೆ ಮನವಿ
ಗ್ರಾಮದ ಮುಖಂಡರಾದ ನಾಗಣ್ಣಗೌಡ ಮಾತನಾಡಿ ‘ನಮ್ಮ ಗ್ರಾಮ ಕಂದಾಯ ಗ್ರಾಮವಾಗಿ 6 ವರ್ಷಗಳು ಕಳೆದಿದ್ದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ ಗ್ರಾಮದಲ್ಲಿ ಸರ್ವೇ ಕೆಲಸ ಪೂರ್ಣಗೊಂಡಿಲ್ಲ. ಇತರೆ ದಾಖಲೆಗಳಲ್ಲಿ ಗುಮ್ಮನಹಳ್ಳಿ ರಾಗಿಮುದ್ದನಹಳ್ಳಿ ಗ್ರಾಮಗಳ ಹೆಸರು ಬದಲಾಗುತ್ತಿದ್ದು ಗೊಂದಲವಾಗಿದೆ. ಗ್ರಾಮದಲ್ಲಿ ಪಶು ಆಸ್ವತ್ರೆ ಬಸ್‌ಗಳ ಸಮಸ್ಯೆಗಳಿಗೆ ಶಾಸಕ ದರ್ಶನ್ ಮುಕ್ತಿಗೊಳಿಸಿದ್ದಾರೆ. ಆದರೆ ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಿಸಬೇಕು. ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಡಿಂಕಾ ರಸ್ತೆ ಅಭಿವೃದ್ಧಿಗೊಳಿಸಿ’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.