ADVERTISEMENT

ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಕಾನೂನು ಕ್ರಮ

ಜಿಲ್ಲೆಯ ಹಲವು ಕೆರೆ ವೀಕ್ಷಿಸಿದ ವಿಧಾನಸಭೆ ಭರವಸೆ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:45 IST
Last Updated 26 ಫೆಬ್ರುವರಿ 2021, 2:45 IST
ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿಯ ಕೆರೆಗೆ ಗುರುವಾರ ವಿಧಾನಸಭೆ ಭರವಸೆ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿಯ ಕೆರೆಗೆ ಗುರುವಾರ ವಿಧಾನಸಭೆ ಭರವಸೆ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಮಂಡ್ಯ: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕಾಮಗಾರಿ ಕೈಗೊಂಡಿರುವ ಬಗ್ಗೆ ಸಾರ್ನಿಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮದ್ದೂರು ತಾಲೂಕು ರುದ್ರಾಕ್ಷಿಪುರ, ಕೆ. ಹೊನ್ನಲಗೆರೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಯಲಿಯೂರು ಹಾಗೂ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮಗಳ ಕೆರೆಗಳಿಗೆ ವಿಧಾನಸಭೆ ಭರವಸೆ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಗುತ್ತಿಗೆದಾರರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆಯಿಂದ ಕಂಡುಬಂದಿದೆ. ಈಗಾಗಲೇ 15 ಎಕರೆ ಜಮೀನನ್ನು ಖಾಸಗಿಯವರಿಂದ ಖರೀದಿಸಿ ಸಣ್ಣ ನೀರಾವರಿ ಇಲಾಖೆಗೆ ನೀಡಲಾಗಿದೆ. ಅದೇ ರೀತಿ ರುದ್ರಾಕ್ಷಿಪುರ, ಕೆ. ಹೊನ್ನಲಗೆರೆ ಗ್ರಾಮಗಳ ಕೆರೆಗಳಲ್ಲೂ ಒತ್ತುವರಿ ಆಗಿರುವುದು ಕಂಡುಬಂದಿದೆ’ ಎಂದರು.

‘ಪರಿಶೀಲಿಸಿದ ವೇಳೆ ಮೇಲ್ನೋಟಕ್ಕೆ ಕೆರೆ ಒತ್ತುವರಿಯಾಗಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸುವುದರ ಜತೆಗೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಮಿತಿ ಸದಸ್ಯ, ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ‘ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣನ್ನು ಸಾಗಿಸಿದ್ದಾರೆ. ಕೆರೆಗಳನ್ನು ಅಭಿವೃದ್ಧಿಪಡಿಸಿಲ್ಲ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಗುತ್ತಿಗೆದಾರರೇ ಇದಕ್ಕೆ ಹೊಣೆಗಾರರು’ ಎಂದು ಆರೋಪಿಸಿದರು.

ಸಮಿತಿ ಸದಸ್ಯರಾದ ಸೋಮನಗೌಡ ಬಿ. ಪಾಟೀಲ್, ಎಸ್. ರಾಮಪ್ಪ, ಹರೀಶ್ ಪೂಂಜ, ಸಂಜೀವ ಮಠಂದೂರು, ವೆಂಕಟರೆಡ್ಡಿ ಮುದ್ನಾಳ್, ಅಧೀನ ಕಾರ್ಯದರ್ಶಿ ಸುಬ್ರಹ್ಮಣ್ಯ ಎಸ್. ಕುಮಟ, ಶಾಖಾಧಿಕಾರಿ ಮಲ್ಲಿಕಾರ್ಜುನಯ್ಯ, ಜಿಲ್ಲಾಧಿಕಾರಿ ಎಸ್. ಅಶ್ವಥಿ, ಜಿಪಂ ಸಿಇಒ ಜುಲ್ಫೀಖರ್ ಉಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.