ಮದ್ದೂರು: ನಿಖಿಲ್ ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮೊದಲು ಅವರ ಪಕ್ಷದ ಸ್ಥಿತಿಯನ್ನು ನೋಡಿಕೊಳ್ಳಲಿ ಎಂದು ಶಾಸಕ ಕೆ.ಎಂ. ಉದಯ್ ತಿರುಗೇಟು ನೀಡಿದರು.
ತಾಲ್ಲೂಕಿನ ದುಂಡನಹಳ್ಳಿಯಲ್ಲಿ ಶುಕ್ರವಾರ ₹3 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ನೀಡಿದ್ದ ‘ಮುಂದೆ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹುಡುಕುವ ಪರಿಸ್ಥಿತಿ ಬರುತ್ತದೆ’ ಎಂಬ ಹೇಳಿಕೆಗೆ ಶಾಸಕರು ಪ್ರತಿಕ್ರಿಯೆ ನೀಡಿದರು.
ಅವರಲ್ಲಿರುವ 18 ಮಂದಿ ಶಾಸಕರು ಒಲ್ಲದ ಮನಸ್ಸಿನಿಂದ ಅಲ್ಲಿದ್ದಾರೆ ಎಂದ ಅವರು, ಕಳೆದ ವಾರ ಭಾರತಿನಗರದಲ್ಲಿ ನಡೆದ ಅವರದ್ದೇ ಕಾರ್ಯಕ್ರಮದಲ್ಲಿ ಅವರ ಕಾರ್ಯಕರ್ತರೇ ‘ಬನ್ನಿ, ಬನ್ನಿ ಖಾಲಿ ಕುರ್ಚಿ ಭರ್ತಿಯಾಗಲಿ’ ಎಂದು ಕೂಗಿಗೊಳ್ಳುತ್ತಿದ್ದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಪರಿಸ್ಥಿತಿ ಹೀಗಿರುವಾಗ ನಮ್ಮ ಬಗ್ಗೆ ಯೋಚಿಸಿ ಮಾತನಾಡಲಿ ಎಂದರು.
‘ಸಿದ್ದರಾಮಯ್ಯ ಅವರು 5 ವರ್ಷವೂ ನಾನೇ ಮುಖ್ಯಮಂತ್ರಿ ಎಂದಿದ್ದರಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಷ್ಟಕ್ಕೂ ಅವರ ಬದಲಾವಣೆಯ ಬಗ್ಗೆ ಯಾರೂ ಕೇಳುತ್ತಿಲ್ಲ. ಅವರ ಸ್ಥಾನಕ್ಕೆ ಪಕ್ಷದಲ್ಲಿ ಎಲ್ಲರ ಒಮ್ಮತವಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಯಾಗುವ ಅರ್ಹತೆಯಿದ್ದು, ಆ ಕಾಲವೂ ಬರುತ್ತದೆ ಎಂದರು.
ದಸರಾ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗುತ್ತದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಎಲ್ಲಿಂದಲೂ ಕ್ರಾಂತಿಯಾಗುವುದಿಲ್ಲ. ಸಿದ್ದರಾಮಯ್ಯ ಅವರೇ ದಸರಾಗೆ ಚಾಲನೆ ನೀಡಲಿದ್ದಾರೆ’ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ಗಿರಿಯಪ್ಪ, ರಮೇಶ್, ಆನಂದ್, ದಾಸೇಗೌಡ, ಶಂಕರಲಿಂಗೇಗೌಡ, ಸುರೇಶ್, ಚಂದ್ರಾನಾಯಕ್, ಚಾಕನಕೆರೆ ಕುಮಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿ ದೇವಾನಂದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.