ADVERTISEMENT

ಕಲಾವಿದರ ನಡುವಿನ ತಾರತಮ್ಯ ಬದಲಾಗಲಿ: ಜಿ.ಆರ್‌.ಶ್ರೀವತ್ಸ ಅಭಿಮತ

‘ಜನಪದ ಕಲಾವಿದರ ಬಿಕ್ಕಟ್ಟು’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 12:34 IST
Last Updated 27 ಸೆಪ್ಟೆಂಬರ್ 2020, 12:34 IST
‘ಕೊರೊನಾ ಕಾಲದಲ್ಲಿ ಜನಪದ ಕಲಾವಿದರ ಬಿಕ್ಕಟ್ಟುಗಳು’ ಕುರಿತ ವಿಚಾರ ಸಂಕಿರಣದಲ್ಲಲಿ ಹಿರಿಯ ಸೋಬಾನೆ ಕಲಾವಿದೆ ಹನುಮಮ್ಮ ಅವರನ್ನು ಸನ್ಮಾನಿಸಲಾಯಿತು
‘ಕೊರೊನಾ ಕಾಲದಲ್ಲಿ ಜನಪದ ಕಲಾವಿದರ ಬಿಕ್ಕಟ್ಟುಗಳು’ ಕುರಿತ ವಿಚಾರ ಸಂಕಿರಣದಲ್ಲಲಿ ಹಿರಿಯ ಸೋಬಾನೆ ಕಲಾವಿದೆ ಹನುಮಮ್ಮ ಅವರನ್ನು ಸನ್ಮಾನಿಸಲಾಯಿತು   

ಮಂಡ್ಯ: ‘ಕಲಾವಿದರ ನಡುವೆ ಸಾಕಷ್ಟು ವ್ಯತ್ಯಾಸ, ತಾರತಮ್ಯಗಳಿದ್ದು, ಅದು ಬದಲಾಗದ ಹೊರತು ಜನಪದ ಕಲಾವಿದರ ಬಿಕ್ಕಟ್ಟು ಬದಲಾಗುವುದಿಲ್ಲ ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜಿ.ಆರ್‌.ಶ್ರೀವತ್ಸ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಸಂಘ, ಜನಪದ ಜನ್ನೆಯರು ಸಂಘಟನೆ ವತಿಯಿಂದ ಇಲ್ಲಿನ ಕೆವಿಎಸ್‌ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ‘ಕೊರೊನಾ ಕಾಲದಲ್ಲಿ ಜನಪದ ಕಲಾವಿದರ ಬಿಕ್ಕಟ್ಟುಗಳು ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಖ್ಯಾತನಾಮ ಗಾಯಕರು, ನಟರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ನೀಡಲಾಗುತ್ತದೆ. ಆದರೆ ಜನಪದ ಕಲಾವಿದರಿಗೆ ಸಂಭಾವನೆ ವಿಷಯದಲ್ಲಿ ಅನ್ಯಾಯ ಮಾಡುತ್ತಾರೆ. ಕಿಲೋ ಮೀಟರ್‌ಗಟ್ಟಲೇ ಜನಪದ ಕಲಾವಿದರು ಸಾಗಿ ಸಂಸ್ಕೃತಿಯ ಸಾರವನ್ನು ಎತ್ತಿ ಹಿಡಿದರೂ ಅವರಿಗೆ ಐನೂರು, ಸಾವಿರ ನೀಡುತ್ತಾರೆ. ಅವರ ಕಲೆಗೆ ಬೆಲೆಯೇ ಇಲ್ಲದಂತಾಗಿದ್ದು, ಮೊದಲು ಈ ತಾರತಮ್ಯ ಬದಲಾಗಬೇಕು’ ಎಂದರು.

ADVERTISEMENT

‘ಜನಪದ ಕಲಾವಿದರು ಎಂದರೆ ಕೆಲವರು ಅನುಮಾನದಿಂದ ನೋಡುತ್ತಾರೆ. ಕಲಾವಿದರು ಮೇಲು ಕೀಳು ತಾರತಮ್ಯವನ್ನು ಮೊದಲು ಎದುರಿಸಬೇಕು, ಯಾವುದೇ ಕಾರಣಕ್ಕೆ ಕುಗ್ಗಬಾರದು. ಅನುಮಾನ, ಅವಮಾನ ಎದುರಿಸಿದಾಗ ತನ್ನಿಂದ ತಾನೇ ಸನ್ಮಾನ, ಸ್ಥಾನ ಮಾನಗಳು ಸಿಗುತ್ತದೆ. ನಟ, ನಟಿಯರು ನಮ್ಮ ನಿಜವಾದ ಐಕಾನ್‌ಗಳಲ್ಲ. ಐಕಾನ್‌ಗಳು ಎಂದುಕೊಂಡಿದ್ದವರು ಡ್ರಗ್ಸ್‌ ಜಾಲದಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಜನಪದ ಕಲಾವಿದರು ಎಂದಿಗೂ ಈ ರೀತಿಯ ಕೆಲಸಗಳನ್ನು ಮಾಡಿಲ್ಲ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಲಾವಿದರೇ ಆಗಿದ್ದಾರೆ. ರೈತರು ಒಂದು ರೀತಿಯಲ್ಲಿ ಕಲಾವಿದರೇ. ಉಳುವ, ನಾಟಿ ಮಾಡುವ, ಕಟಾವು ಮಾಡುವ ಎಲ್ಲಾ ಕೆಲಸಗಳು ಒಂದು ಕಲೆಗಳೇ ಆಗಿವೆ. ಆಯುರ್ವೇದವೂ ಸಹ ಜನಪದ ಕಲೆಯೇ ಆಗಿದೆ. ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೇ ಗುಣವಾಗದ ಕಾಯಿಲೆಗಳು ಆಯುರ್ವೇದ, ನಾಟಿ ಔಷಧಿಯಿಂದ ಗುಣವಾಗಿದೆ. ಕೊರೊನಾ ಕಾಲದಲ್ಲಿಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಿಕೆಗಳಾಗಿ ಅರಿಶಿಣ, ಶುಂಠಿ, ಮೆಣಸು ಕೆಲಸ ಮಾಡಿವೆ’ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ ‘ಕೋವಿಡ್‌ ಲಾಕ್‌ಡೌನ್‌ ನಂತರದ ದಿನಗಳಲ್ಲಿ ಮಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದ್ದು, ಹಿರಿಯ ಸೋಬಾನೆ ಕಲಾವಿದೆ ಹನುಮಮ್ಮ ಅವರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ₹5 ನಗದು ಬಹುಮಾನ ನೀಡುತ್ತಿದ್ದು, ಜೀವನಕ್ಕೆ ಸಣ್ಣ ರೀತಿಯಲ್ಲಿ ನೆರವಾಗುತ್ತದೆ’ ಎಂದರು.

ಜಾನಪದ ವಿದ್ವಾಂಸ ಡಾ.ಅರುಣ್‌ ಜೋಳದ ಕೂಡ್ಲಗಿ, ಸರ್ಕಾರಿ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಕೆಂಪಮ್ಮ ವಿಚಾರ ಮಂಡಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್‌ ಎನ್‌.ನಮ್ರತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.