
ನಾಗಮಂಗಲ: ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲ್ಲೂಕಿನ ತುಪ್ಪದಮಡು ಗ್ರಾಮದಲ್ಲಿ ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ನಡೆದ ಮತ್ಸ್ಯ ಸಂಜೀವಿನಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮತ್ಸ್ಯ ಸಂಜೀವಿನಿ ಯೋಜನೆಯನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಕುಟುಂಬ ನಿರ್ವಹಣೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿಯಾಗಲಿದೆ’ ಎಂದರು.
‘ಜಿಲ್ಲೆಯಲ್ಲಿ ಒಟ್ಟು 250 ಮಹಿಳಾ ಸದಸ್ಯರನ್ನೊಳಗೊಂಡ 49 ಸ್ವಸಹಾಯ ಗುಂಪುಗಳು ಮತ್ತು 49 ಕೆರೆಗಳನ್ನು ಮತ್ಸ್ಯ ಸಂಜೀವಿನಿ ಯೋಜನೆಗೆ ಆಯ್ಕೆ ಮಾಡಿ ಒಟ್ಟು 9 ಲಕ್ಷ ಮೀನು ಮರಿಗಳನ್ನು ಕರೆಗಳಿಗೆ ಬಿಟ್ಟು ಸಾಕಾಣಿಕೆ ಮಾಡಿಸುವ ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ತುಪ್ಪದಮಡು, ಕಾಳಿಂಗನಹಳ್ಳಿ, ದೇವರಮಲ್ಲನಾಯ್ಕನಹಳ್ಳಿ, ಭೀಮನಹಳ್ಳಿ ಹಾಗೂ ದೊಡ್ಡಾಬಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 5 ಕೆರೆಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.
ತುಪ್ಪದಮಡು ಗ್ರಾಮದ ಚಿಕ್ಕಕೆರೆಗೆ ಯೋಜನೆಯ ಹತ್ತು ಸಾವಿರ ಮೀನು ಮರಿಗಳನ್ನು ಸಚಿವರು ಕೆರೆಗೆ ಬಿಟ್ಟರು. ಗ್ರಾಮದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ತಯಾರಿಸುವ ಆಹಾರ ಉತ್ಪನ್ನಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕೃತ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಎಚ್.ಬಾಬಾಸಾಬ್, ತಾ.ಪಂ. ಇಒ ಬಿ.ಎಸ್.ಸತೀಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಮುಖಂಡರಾದ ಎಂ.ರಾಘವೇಂದ್ರ, ಚಿಕ್ಕಮ್ಮ, ಗೀತಾ, ಕಾಂತ, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.