ADVERTISEMENT

ಮಂಡ್ಯ | ಭಣಗುಡುತ್ತಿವೆ ಬಾರ್‌: ಕೆಲಸ ಕಿತ್ತುಕೊಂಡ ಕೋವಿಡ್‌

ಮದ್ಯ ಮಾರಾಟದಲ್ಲಿ ದೇಶದ ಗಮನ ಸೆಳೆದಿದ್ದ ಮಂಡ್ಯ ಜಿಲ್ಲೆ, ಸಂಕಷ್ಟ ತಂದಿಟ್ಟ ಕೊರೊನಾ ಸೋಂಕು

ಎಂ.ಎನ್.ಯೋಗೇಶ್‌
Published 27 ಆಗಸ್ಟ್ 2020, 20:00 IST
Last Updated 27 ಆಗಸ್ಟ್ 2020, 20:00 IST
ಗ್ರಾಹಕರಿಲ್ಲದೇ ಭಣಗುಡುತ್ತಿರುವ ಬಾರ್‌
ಗ್ರಾಹಕರಿಲ್ಲದೇ ಭಣಗುಡುತ್ತಿರುವ ಬಾರ್‌   

ಮಂಡ್ಯ: ಮದ್ಯಮಾರಾಟದಲ್ಲಿ ದೇಶದ ಗಮನ ಸೆಳೆದಿದ್ದ ಜಿಲ್ಲೆಯ ಮದ್ಯದಂಗಡಿಗಳ ವಹಿವಾಟು ಈಗ ನೆಲ ಕಚ್ಚಿದೆ. ಕೋವಿಡ್‌–19 ಪರಿಣಾಮದಿಂದಾಗಿ ವೈನ್‌ ಶಾಪ್‌, ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು, ಕಾರ್ಮಿಕರು ಕಂಗಾಲಾಗಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಬಾರ್‌, ವೈನ್‌ಶಾಪ್‌ ಬಂದ್‌ ಆಗಿದ್ದ ಕಾರಣ ವಿವಿಧೆಡೆ ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ಮಾರಾಟ ಕಂಡು ಬಂದಿತ್ತು. ಮದ್ಯ ಮಾರಾಟಕ್ಕೆ ಅವಕಾಶ ಸಿಗುತ್ತಿದ್ದಂತೆಯೇ ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಖರೀದಿ ಮಾಡಿದ್ದರು. ಜನರ ನಿಯಂತ್ರಣಕ್ಕಾಗಿ ಪ್ರತಿ ಅಂಗಡಿಗಳ ಮುಂದೆ ಬ್ಯಾರಿಕೇಡ್‌ ಹಾಕಲಾಗಿತ್ತು. ಮದ್ಯಕ್ಕಾಗಿ ಹೊಡೆದಾಟವೂ ನಡೆದಿತ್ತು. ಆದರೆ ದಿನಕಳೆದಂತೆ ಆ ಪರಿಸ್ಥಿತಿ ಮಾಯವಾಗಿದೆ. ಸದ್ಯ ಅಂಗಡಿಗಳು ಭಣಗುಡುತ್ತಿದ್ದು ಗ್ರಾಹಕರಿಗಾಗಿ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ.

ನಗರ, ಪಟ್ಟಣಗಳ ಅಂಗಡಿಗಳಿಗೆ ಗ್ರಾಮೀಣ ಗ್ರಾಹಕರೇ ಆಧಾರವಾಗಿದ್ದರು. ನಿತ್ಯ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ನಗರ ಪ್ರದೇಶಕ್ಕೆ ಬರಲು ಹಿಂಜರಿಯುತ್ತಿದ್ಧಾರೆ. ಜೊತೆಗೆ ಹಳ್ಳಿಗಳಿಗೆ ಸಾರಿಗೆ ಬಸ್‌ಗಳ ಸಂಪರ್ಕ ಸ್ಥಗಿತಗೊಂಡಿರುವ ಕಾರಣ ಜನರು ನಗರ, ಪಟ್ಟಣಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಕೆಲವೇ ಮಾರ್ಗಗಳಿಗಷ್ಟೇ ಬಸ್‌ಗಳು ಓಡಾಡುತ್ತಿವೆ. ಬಹುತೇಕ ಖಾಸಗಿ ಬಸ್‌ಗಳು ಕೂಡ ಸಂಚಾರ ನಿಲ್ಲಿಸಿವೆ. ಹೀಗಾಗಿ ಜನರು ಹಳ್ಳಿಗಳಲ್ಲೇ ಉಳಿಯುವಂತಾಗಿದ್ದು ಬಾರ್‌, ವೈನ್‌ಶಾಪ್‌ಗಳಿಗೆ ವ್ಯಾಪಾರ ಇಲ್ಲವಾಗಿದೆ.

ADVERTISEMENT

ಕೋವಿಡ್‌ ಅವಧಿಗೂ ಮೊದಲು ಅಬಕಾರಿ ಇಲಾಖೆ ವರ್ಷದ ವಹಿವಾಟು ಜಿಲ್ಲೆಯಲ್ಲಿ ₹ 500 ಕೋಟಿ ಗಡಿ ತಲುಪುತ್ತಿತ್ತು. ಆದರೆ ಈಗ ಸರಾಸರಿ ವಹಿವಾಟು ಅದರ ಅರ್ಧವನ್ನೂ ತಲುಪಲು ಸಾಧ್ಯವಾಗಿಲ್ಲ. ಏಪ್ರಿಲ್‌–ಜುಲೈ ಅವಧಿಯಲ್ಲಿ 4,80,681 ಬಾಕ್ಸ್‌ ದೇಶೀಯ ತಯಾರಿಕಾ ಮದ್ಯ, 1,00,534 ಬಾಕ್ಸ್‌ ಬಿಯರ್‌ ಮಾರಾಟವಾಗಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 6,34,069 ಬಾಕ್ಸ್‌ ಮದ್ಯ, 2,22,456 ಬಾಕ್ಸ್‌ ಬಿಯರ್‌ ಮಾರಾಟವಾಗಿತ್ತು. ಒಟ್ಟಾರೆ ಶೇ 24.19 ಮದ್ಯ, ಶೇ 54.81 ಬಿಯರ್‌ ಬಳಕೆ ಕಡಿಮೆಯಾಗಿದೆ ಎಂದು ಅಬಕಾರಿ ಇಲಾಖೆ ಅಂಕಿ ಅಂಶ ಹೇಳುತ್ತವೆ.

ಕಾರ್ಮಿಕರಿಗೆ ಕೆಲಸವಿಲ್ಲ: ಸದ್ಯ ಅಬಕಾರಿ ಇಲಾಖೆ ಮದ್ಯ ಪಾರ್ಸೆಲ್‌ಗಷ್ಟೇ ಅವಕಾಶ ನೀಡಿದೆ. ಬಾರ್‌ ಮತ್ತು ರೆಸ್ಟೋರೆಂಟ್‌, ಡಾಬಾಗಳಲ್ಲಿ ಮದ್ಯ ಸೇವೆಗೆ (ಸ್ಥಳೀಯ ವಿತರಣೆ) ಅವಕಾಶ ನೀಡಿಲ್ಲ. ಹೀಗಾಗಿ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿ ಜೀವನ ಕಂಡುಕೊಂಡಿದ್ದ ಸಾವಿರಾರು ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ.

ಸದ್ಯ ಬಾರ್‌, ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ಒಂದೆರಡು ಸಿಬ್ಬಂದಿಯಷ್ಟೇ ಇದ್ದಾರೆ. ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇರುವ ಕಾರ್ಮಿಕರಿಗೂ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತಿದೆ. ಬಹುತೇಕ ವೈನ್‌ಶಾಪ್‌ಗಳಲ್ಲಿ ಮಾಲೀಕರೇ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರು ಕಂಗಾಲಾಗಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ.

‘ಮೊದಲು ತಿಂಗಳಿಗೆ ₹ 15 ಸಾವಿರದವರೆಗೆ ಸಂಬಳ ದೊರೆಯುತ್ತಿತ್ತು. ಇದರ ಜೊತೆಗೆ ಗ್ರಾಹಕರಿಗೆ ಸೇವೆ ನೀಡಿದಾಗ ಅವರು ಪ್ರೀತಿಯಿಂದ ಟಿಪ್ಸ್‌ ನೀಡುತ್ತಿದ್ದರು. ಆದರೆ ನಾವೀಗ ಟಿಪ್ಸ್‌ ಮುಖ ನೋಡಿಯೇ ನಾಲ್ಕು ತಿಂಗಳು ಕಳೆದವು. ಸಂಬಳ ಕೂಡ ₹ 5 ಸಾವಿರಕ್ಕೆ ಇಳಿದಿದೆ’ ಎಂದು ಬಾರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ ಪ್ರಶಾಂತ್‌ ನೋವಿನಿಂದ ಹೇಳಿದರು.

‘ಕೋವಿಡ್‌ಗೂ ಮೊದಲು ನಿತ್ಯದ ವಹಿವಾಟು ₹ 2 ಲಕ್ಷದ ಗಡಿ ದಾಟುತ್ತಿತ್ತು. ಆದರೆ ಈಗ ₹ 50 ಸಾವಿರಕ್ಕೂ ತಲುಪುತ್ತಿಲ್ಲ. ಜನರು ಕುಡಿಯುವುದನ್ನೇ ನಿಲ್ಲಿಸಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ. ಪರಿಸ್ಥಿತಿ ಮೊದಲಿನಂತಾದರೆ ಸಾಕು’ ಎಂದು ವೈನ್‌ಶಾಪ್‌ ಮಾಲೀಕ ಶೇಖರ್‌ಗೌಡ ಹೇಳಿದರು.

ಬಾರ್‌, ರೆಸ್ಟೋರೆಂಟ್‌ ಸೇವೆ ಸೆ.1ರಿಂದ?

ಸದ್ಯ ಮದ್ಯದಂಗಡಿಯಲ್ಲಿ ಪಾರ್ಸೆಲ್‌ ಸೇವೆ ಮಾತ್ರವಿದೆ. ಸೆ.1ರಿಂದ ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವೆ ಆರಂಭವಾಗಲಿದೆ ಎಂಬ ನಿರೀಕ್ಷೆ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಇದೆ.

‘ಈ ಬಗ್ಗೆ ಸರ್ಕಾರ ಇನ್ನೂ ಸ್ಪಷ್ಟವಾದ ಸೂಚನೆ ನೀಡಿಲ್ಲ. ನಿರ್ದೇಶನ ಬಂದ ನಂತರ ಎಲ್ಲರಿಗೂ ತಿಳಿಸಲಾಗುವುದು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕ್ಲಬ್‌ಗಳಲ್ಲಿ ಶೂನ್ಯ ಸಂಪಾದನೆ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕ್ಲಬ್‌ಗಳ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕ್ಲಬ್‌ ಸೇವೆ ಇಲ್ಲದ ಕಾರಣ ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ಐದು ಕ್ಲಬ್‌ಗಳು ಶೂನ್ಯ ಸಂಪಾದನೆ ಮಾಡಿವೆ. ವಿವಿಧೆಡೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿದೆ.

‘ಹುಡುಗರಿಗೆ ಸಂಬಳ ನೀಡಲೂ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿ ಎಂದೂ ಎದುರಾಗಿರಲಿಲ್ಲ’ ಎಂದು ಸ್ಪೋರ್ಟ್ಸ್‌ ಕ್ಲಬ್‌ ಕಾರ್ಯದರ್ಶಿ ಸತ್ಯಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.