ADVERTISEMENT

2 ತಿಂಗಳ ನಂತರ ಸಹಜ ಸ್ಥಿತಿಗೆ ಮರಳಿದ ಮಂಡ್ಯ ಜಿಲ್ಲೆ

ಅಂಗಡಿ–ಮುಂಗಟ್ಟುಗಳಲ್ಲಿ ಉತ್ಸಾಹದ ವಾತಾವರಣ, ರಸ್ತೆಗಿಳಿದ ಜನ, ಅಂತರ ಕಾಪಾಡಿಕೊಳ್ಳಲು ವಿಫಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 14:01 IST
Last Updated 21 ಜೂನ್ 2021, 14:01 IST
ಮಂಡ್ಯ ಬಸ್‌ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿರುವುದು
ಮಂಡ್ಯ ಬಸ್‌ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿರುವುದು   

ಮಂಡ್ಯ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ವ್ಯಾಪಾರ ವಹಿವಾಟು, ಜನಜೀವನ ಸಹಜ ಸ್ಥಿತಿಗೆ ಮರಳಿತು. ಕಳೆದೆರಡು ತಿಂಗಳುಗಳಿಂದ ಮುಚ್ಚಿದ್ದ ಅಂಗಡಿಗಳು ತೆರೆದು ವಹಿವಾಟು ನಡೆಸಿದವು, ಸಾರಿಗೆ ಸಂಸ್ಥೆ ಬಸ್‌ಗಳು ಓಡಾಡಿದವು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌, ಸಂಪೂರ್ಣ ಲಾಕ್‌ಡೌನ್‌ ತೆರವುಗೊಂಡಿದ್ದು ಸೋಮವಾರ ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ನಗರದಲ್ಲಿ ಉತ್ಸಾಹದ ವಾತಾವರಣವಿತ್ತು. ಅಂಗಡಿ ಮಾಲೀಕರು, ಸಿಬ್ಬಂದಿ ಬಾಗಿಲು ತೆರೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಜನರು ರಸ್ತೆಗೆ ಇಳಿದಿದ್ದರು. ಸಂಪೂರ್ಣ ಲಾಕ್‌ಡೌನ್‌ ಇದ್ದಾಗ ದಿನದ ನಡುವೆ ನೀಡುತ್ತಿದ್ದ ಬಿಡುವಿನ ದಿನದಲ್ಲಿ ಇರುತ್ತಿದ್ದ ಧಾವಂತ ಇರಲಿಲ್ಲ. ಹೋಟೆಲ್‌ಗಳಲ್ಲಿ ಶೇ 50ರಷ್ಟು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಜನರು ಹೋಟೆಲ್‌ ಒಳಗೆ ತೆರಳಿ ತಿಂಡಿ, ಊಟ ಮಾಡಿದರು. ನಗರದ ಪೇಟೆಬೀದಿ, ವಿವಿ ರಸ್ತೆ, ಆರ್ ಪಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ಗುತ್ತಲು ಸೇರಿದಂತೆ ಎಲ್ಲೆಡೆ ಅಂಗಡಿಗಳು ತೆರೆದಿದ್ದವು.

ADVERTISEMENT

ಉದ್ಯಾನದಲ್ಲಿ ಜನಸಂದಣಿ: ಮುಂಜಾನೆ ವಿಹಾರಕ್ಕೆ ಅವಕಾಶ ಇರುವ ಕಾರಣ ನಗರದ ಹಲವು ಉದ್ಯಾನಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡು ಬಂತು. ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನ, ಜಿಲ್ಲಾ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯ ಜನರು ವಿಹಾರ ನಡೆಸುತ್ತಿದ್ದರು. ಬೆಳಿಗ್ಗೆಯೇ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಿತ್ತು. ವಿವಿಧೆಡೆ ವ್ಯಕ್ತಿಗತ ಅಂತರ, ಸರಿಯಾಗಿ ಮಾಸ್ಕ್ ಧರಿಸದಿರುವುದು ಅಲ್ಲಲ್ಲಿ ಕಂಡು ಬಂದಿತು. ವಿವಿಧ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿತ್ತು. ಪೊಲೀಸದ್‌ ಭದ್ರತೆ ಕಡಿಮೆ ಇತ್ತು.

ಸಂಜೆ 5 ಗಂಟೆಗೆ ಬಂದ್‌: ಸಂಜೆ 5 ಗಂಟೆಯಾಗುತ್ತಲೇ ಪೊಲೀಸರು ರಸ್ತೆಗಿಳಿದಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿದರು. ಬಾಗಿಲು ಮುಚ್ಚಿ ಒಳಗೆ ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರಿಗೆ ಸ್ಥಳದಲ್ಲೇ ದಂಡ ವಿಧಿಸಿದರು. ಜಿಲ್ಲೆಯಲ್ಲಿ ನಿತ್ಯ 200 ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಕೊರೊನಾ ನಿಯಮ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸಬೇಕಿದೆ ಎಂದು ಪೊಲೀಸರು ಜಾಗೃತಿ ಮೂಡಿಸಿದರು.

ಮುಗಿಯದ ಭಯ: ಕೆಲವು ಜಿಲ್ಲೆಗಳಲ್ಲಿ ಕಳೆದ ವಾರವೇ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಮಂಡ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿದ್ದ ಕಾರಣ ಮತ್ತೆ ಒಂದು ವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಈಗಲೂ ಕೋವಿಡ್‌ ಪ್ರಕರಣ ಹೆಚ್ಚಿದ್ದು ಸಾರ್ವಜನಿಕರು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.