ADVERTISEMENT

ಲಾರಿ–ಕಾರು ಮುಖಾಮುಖಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:13 IST
Last Updated 26 ಜೂನ್ 2022, 4:13 IST
   

ಮಂಡ್ಯ: ನಾಗಮಂಗಲ ಹೊರವಲಯ ಎಂ.ಹೊಸೂರು ಗೇಟ್ ಬಳಿ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.

ನಾಗಮಂಗಲ ತಾಲ್ಲೂಕು ಬೀರೇಶ್ವರಪುರದ ದೇವರಾಜು (42), ಪಾಂಡವಪುರ ತಾಲ್ಲೂಕಿನ ವದೇಸಮುದ್ರ ಗ್ರಾಮದ ನಿವಾಸಿ, ಕನಗನಮರಡಿ ವೃತ್ತದ ಗ್ರಾಮ ಸಹಾಯಕ ಮಂಜುನಾಥ್ (55), ಕೆನ್ನಾಳು ಗ್ರಾಮದ ರೈತ ಮಂಜುನಾಥ್ (64) ಮೃತಪಟ್ಟಿದ್ದಾರೆ.

ಪಾಂಡವಪುರ ತಾಲ್ಲೂಕಿನ ಎಲೆಕೆರೆ ಗ್ರಾಮದ ನಿವಾಸಿ ದಾಮರಹಳ್ಳಿ ವೃತ್ತದ ಗ್ರಾಮ ಸಹಾಯಕ ಸ್ವಾಮಿ (50) ತೀವ್ರವಾಗಿ ಗಾಯಗೊಂಡಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ADVERTISEMENT

ದೇವರಾಜು ಪಾಂಡವಪುರದಲ್ಲಿ ಗ್ರಾಮ ಲೆಕ್ಕಿಗನಾಗಿ‌ ಕಾರ್ಯ ನಿರ್ವಹಿಸುತ್ತಿದ್ದು, ಶನಿವಾರ ಕಚೇರಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಹಾಯಕರೊಂದಿಗೆ ಸ್ವಗ್ರಾಮದ ಜಮೀನಿನ ಕೆಲಸದ ಉದ್ದೇಶದಿಂದ ಗ್ರಾಮಕ್ಕೆ ಬಂದಿದ್ದರು. ಸಂಜೆ ಕೆಲಸ ಮುಗಿಸಿ ಸ್ಯಾಂಟ್ರೊ ಕಾರಿನಲ್ಲಿ ನಾಗಮಂಗಲ ಕಡೆಯಿಂದ ಪಾಂಡವಪುರದ ಕಡೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಎಂ.ಹೊಸೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದ ಮದ್ಯ ತುಂಬಿದ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಮೃತ ದೇಹಗಳನ್ನು ತಾಲ್ಲೂಕು‌ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.