ADVERTISEMENT

ಕೆಎಸ್ಸಾರ್ಟಿಸಿ: ಮಂಡ್ಯ ವಿಭಾಗಕ್ಕೆ ₹ 16 ಕೋಟಿ ನಷ್ಟ

ಗ್ರಾಮೀಣ ಪ್ರದೇಶದಲ್ಲಿ ಪ್ರಯಾಣಿಕರ ಕೊರತೆ, ಜನರಿಗಾಗಿ ಕಾಯುವ ಬಸ್‌ಗಳು

ಎಂ.ಎನ್.ಯೋಗೇಶ್‌
Published 6 ಜೂನ್ 2020, 20:13 IST
Last Updated 6 ಜೂನ್ 2020, 20:13 IST
ಮಂಡ್ಯ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ನೀಡುತ್ತಿರುವ ನಿರ್ವಾಹಕ
ಮಂಡ್ಯ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ನೀಡುತ್ತಿರುವ ನಿರ್ವಾಹಕ   

ಮಂಡ್ಯ: ಎರಡು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡ್ಯ ವಿಭಾಗಕ್ಕೆ ಬರೋಬ್ಬರಿ ₹ 16 ಕೋಟಿ ನಷ್ಟವಾಗಿದೆ. ಈಗ ಬಸ್‌ ಓಡಾಡುತ್ತಿದ್ದರೂ ಪ್ರಯಾಣಿಕರ ಕೊರತೆಯಿಂದಾಗಿ ಸಂಸ್ಥೆ ನಷ್ಟದಲ್ಲೇ ಮುನ್ನಡೆಯುತ್ತಿದೆ.

ಮೇ 19ರಿಂದ ಆಯ್ದ ಮಾರ್ಗಗಳಿಗೆ ಬಸ್‌ ಓಡಾಟಕ್ಕೆ ಚಾಲನೆ ನೀಡಲಾಯಿತು. ಮೊದಲ ವಾರದಲ್ಲಿ ಕೇವಲ 80 ಬಸ್‌ಗಳನ್ನು ಮಾತ್ರ ಬಿಡಲಾಯಿತು. ಬೆಂಗಳೂರು–ಮೈಸೂರು ಮಾರ್ಗಕ್ಕೆ ಪ್ರಯಾಣಿಕರ ಕೊರತೆ ಇಲ್ಲ. ಆದರೆ ಗ್ರಾಮೀಣ ಮಾರ್ಗಗಳಿಗೆ ಜನರು ಬಸ್‌ ಹತ್ತಲು ಹಿಂದೇಟು ಹಾಕುತ್ತಿರುವ ಕಾರಣ ಪೂರ್ಣ ಪ್ರಮಾಣದಲ್ಲಿ ಬಸ್‌ ಸಂಚಾರ ಆರಂಭವಾಗಿಲ್ಲ. 30 ಪ್ರಯಾಣಿಕರು ಬರುವವರೆಗೂ ಕಾದು ಹತ್ತಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಡಿಕೆ ಬಂದಂತೆಲ್ಲಾ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳವ ಮಾಡಲಾಗುತ್ತಿದ್ದು 2ನೇ ವಾರದಲ್ಲಿ 200 ಬಸ್‌ ಬಿಡಲಾಗಿದೆ. 15 ದಿನಗಳವರೆಗೆ ಗ್ರಾಮೀಣ ಪ್ರದೇಶಕ್ಕೆ ಬಸ್‌ ಓಡಾಟ ಇರಲಿಲ್ಲ. ಗುರುವಾರದಿಂದ ಮಂಡ್ಯದಿಂದ ಮದ್ದೂರು, ಮಳವಳ್ಳಿ, ಪಾಂಡವಪುರ, ಬನ್ನೂರು, ಟಿ.ನರಸೀಪುರ ಮಾರ್ಗಗಳಿಗೆ ಬಸ್‌ಗಳು ಓಡಾಡುತ್ತಿವೆ. ಮಳವಳ್ಳಿಗೆ ಮೊದಲ ದಿನ 4 ಬಸ್‌ ಬಿಡಲಾಗಿತ್ತು. ಆದರೆ ಪ್ರಯಾಣಿಕರ ಕೊರತೆಯಿಂದಾಗಿ ಕೇವಲ 2 ಬಸ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು.

ADVERTISEMENT

ಹಣ ಸಂಗ್ರಹದಲ್ಲೂ ಕೊರತೆ: ಲಾಕ್‌ಡೌನ್‌ಗೂ ಮೊದಲು ವಿಭಾಗದ ಪ್ರತಿ ಬಸ್‌ನ ಹಣ ಸಂಗ್ರಹ ₹ 9 ಸಾವಿರ ಇತ್ತು. ಆದರೆ ಈಗ ಪ್ರಯಾಣಿಕರ ಕೊರತೆಯಿಂದಾಗಿ ಪ್ರತಿ ಬಸ್‌ನ ಹಣ ಸಂಗ್ರಹ ₹ 4 ಸಾವಿರಕ್ಕೆ ಕುಸಿದಿದೆ. ಬಸ್‌ಗಳಲ್ಲಿ ಸೋಂಕು ನಿವಾರಕ ಸಿಂಪಡಣೆ, ಅಂತರ ಕಾಪಾಡಿಕೊಳ್ಳುತ್ತಿದ್ದರೂ ಬಸ್‌ ಹತ್ತಲು ಜನರು ಹಿಂಜರಿಯುತ್ತಿದ್ದಾರೆ.

‘ಮೊದಲು ಪ್ರಯಾಣಿಕರು ಬಸ್‌ ಕಾಯುತ್ತಿದ್ದರು. ಆದರೆ ಈಗ ಬಸ್‌ಗಳೇ ಪ್ರಯಾಣಿಕರಿಗಾಗಿ ಕಾಯುತ್ತಿವೆ. ಬಸ್‌, ಕಂಡಕ್ಟರ್‌ಗಳು ಜನರಿಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಬಂದಿದೆ’ ಎಂದು ಸಂಚಾರ ನಿಯಂತ್ರಕರೊಬ್ಬರು ಹೇಳಿದರು.

ಕೊರತೆ ಏಕೆ?: ಬೇಸಿಗೆಯಲ್ಲಿ ಎಲ್ಲೆಡೆ ಮದುವೆಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಗೆ ಹೆಚ್ಚು ಹಣ ಸಂಗ್ರಹವಾಗುತ್ತಿತ್ತು. ಆದರೆ ಈಗ ಮದುವೆ, ಬೀಗರೂಟಗಳು ಸರಳವಾಗಿ ನಡೆಯುತ್ತಿದ್ದು ಓಡಾಡುವ ಜನರೇ ಇಲ್ಲವಾಗಿದ್ದಾರೆ. ಜನರು ಕೊರತೆಯಾಗಲು ಇದೂ ಒಂದು ಕಾರಣವಾಗಿದೆ.

‘ಕೊರೊನಾ ಸೋಂಕಿನ ಭಯ ಇದ್ದೇ ಇರುತ್ತದೆ. ಬಸ್‌ಗಳಲ್ಲಿ ಅಂತರ ಕಾಪಾಡಿಕೊಳ್ಳುತ್ತಿರುವ ಕಾರಣ ಭಯ ಮುಕ್ತರಾಗಿ ಬಸ್‌ ಹತ್ತಬಹುದು. ಆದರೆ ಮದುವೆ, ಜಾತ್ರೆ, ಹಬ್ಬಗಳು ನಿಷೇಧವಾಗಿರುವ ಕಾರಣ ಯಾರೂ ಊರು ಬಿಟ್ಟು ಪಟ್ಟಣಗಳಿಗೆ ತೆರಳುತ್ತಿಲ್ಲ. ಸುಖಾಸುಮ್ಮನೆ ನಗರ, ಪಟ್ಟಗಳಿಗೆ ತೆರಳುತ್ತಿದ್ದವರೂ ಈಗ ಊರಲ್ಲೇ ಇದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಎದುರಾಗಿದೆ’ ಎಂದು ಸುಭಾಷ್‌ ನಗರದ ಶಿವಕುಮಾರ್‌ ಹೇಳಿದರು.

ತಿಂಗಳೊಳಗೆ ಸಹಜ ಸ್ಥಿತಿ

‘ಕಳದ ವರ್ಷವೂ ಮಂಡ್ಯ ವಿಭಾಗಕ್ಕೆ ₹ 6 ಕೋಟಿ ನಷ್ಟವಾಗಿತ್ತು. ಈ ವರ್ಷ ನಷ್ಟ ತುಂಬಿಕೊಳ್ಳಬೇಕಾದ ಜವಾಬ್ದಾರಿ ಇತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಭಾರಿ ನಷ್ಟ ಉಂಟಾಗಿದೆ. ಸಮಗ್ರ ವರದಿಯನ್ನು ನಿಗಮದ ಅಧಿಕಾರಿಗಳಿಗೆ ನೀಡಲಾಗಿದೆ’ ಎಂದು ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್‍ಕುಮಾರ್ ಹೇಳಿದರು.

‘ಶೀಘ್ರ ವಿಭಾಗದ ಎಲ್ಲಾ ಬಸ್‌ಗಳನ್ನು ಬಿಡಲಾಗುವುದು. ತಿಂಗಳೊಳಗೆ ಎಲ್ಲವೂ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.