ADVERTISEMENT

ನಾಲೆ ಸುರಂಗದ ಮೇಲೆ ಎಂ ಸ್ಯಾಂಡ್ ಘಟಕ

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:35 IST
Last Updated 25 ಏಪ್ರಿಲ್ 2019, 20:35 IST
ಶ್ರೀರಂಗಪಟ್ಟಣ ತಾಲ್ಲೂಕಿನ ಆಲಗೂಡು ರಸ್ತೆ ಪಕ್ಕದಲ್ಲಿ ವಿ.ಸಿ ಸಂಪರ್ಕ ನಾಲೆ ಸುರಂಗದ ಮೇಲೆ ತಲೆ ಎತ್ತಿರುವ ಎಂ– ಸ್ಯಾಂಡ್ ಘಟಕ
ಶ್ರೀರಂಗಪಟ್ಟಣ ತಾಲ್ಲೂಕಿನ ಆಲಗೂಡು ರಸ್ತೆ ಪಕ್ಕದಲ್ಲಿ ವಿ.ಸಿ ಸಂಪರ್ಕ ನಾಲೆ ಸುರಂಗದ ಮೇಲೆ ತಲೆ ಎತ್ತಿರುವ ಎಂ– ಸ್ಯಾಂಡ್ ಘಟಕ   

ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನನಕೆರೆ, ಹಂಗರಹಳ್ಳಿ, ಟಿ.ಎಂ. ಹೊಸೂರು, ಮುಂಡುಗದೊರೆ ಆಸುಪಾಸಿನಲ್ಲಿ 20ಕ್ಕೂ ಹೆಚ್ಚು ಜಲ್ಲಿ ಮತ್ತು ಎಂ– ಸ್ಯಾಂಡ್ ಘಟಕಗಳು ಅನಧಿಕೃತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಗೌಡ ದೂರಿದ್ದಾರೆ.

ಜಲ್ಲಿ ಕ್ರಷರ್, ಡಾಂಬರು ಘಟಕ ಮತ್ತು ಎಂ– ಸ್ಯಾಂಡ್ ಘಟಕಗಳಿಂದ ಪರಿಸರಕ್ಕೆ ತೀರಾ ಹಾನಿಯಾಗುತ್ತಿದೆ. ಗಾಳಿ, ನೀರು ಕಲುಷಿತವಾಗುತ್ತಿವೆ. ಈ ಘಟಕಗಳ ಆಸುಪಾಸಿನಲ್ಲಿ ರೈತರು ಕೃಷಿ ಮಾಡಲು ಆಗದೆ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಆಸುಪಾಸಿನ ಗ್ರಾಮಗಳ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಆಲಗೂಡು ಬಳಿ ವ್ಯಕ್ತಿಯೊಬ್ಬರು ವಿ.ಸಿ ಸಂಪರ್ಕ ನಾಲೆ ಸುರಂಗದ (ಟನಲ್) ಮೇಲೆ ಎಂ– ಸ್ಯಾಂಡ್ ಘಟಕ ಆರಂಭಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೂ ಮಾಹಿತಿ ಇಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿಲ್ಲ. ಇಂತಹ ಹತ್ತಾರು ಕ್ರಷರ್ ಮತ್ತು ಎಂ– ಸ್ಯಾಂಡ್ ಘಟಕಗಳು ಕಾರ್ಯ ನಿರ್ವಹಿಸಲು ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಸುರಂಗಕ್ಕೆ ಅಪಾಯ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ತಾಲ್ಲೂಕಿನಲ್ಲಿ ತಿಂಗಳಿಗೆ ಹತ್ತಾರು ಕೋಟಿ ಮೌಲ್ಯದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿವೆ. ಅಕ್ರಮ ಜಲ್ಲಿ ಕ್ರಷರ್‌ಗಳು ಮತ್ತು ಎಂ– ಸ್ಯಾಂಡ್ ಘಟಕಗಳನ್ನು ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ‌’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.