ADVERTISEMENT

ಮದ್ದೂರು: ಘೋಷಣೆಗೆ ಸೀಮಿತವಾದ ‘ಕಂದಾಯ ಗ್ರಾಮ’

ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ: ಬಸ್‌ ಇಲ್ಲದೆ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 6:38 IST
Last Updated 2 ಜೂನ್ 2025, 6:38 IST
ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ ಎಂದು ಗ್ರಾ.ಪಂ ಸದಸ್ಯ ಬೆಟ್ಟಸ್ವಾಮಿಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದರು
ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ ಎಂದು ಗ್ರಾ.ಪಂ ಸದಸ್ಯ ಬೆಟ್ಟಸ್ವಾಮಿಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದರು   

ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮವನ್ನು ‘ಕಂದಾಯ ಗ್ರಾಮ’ವನ್ನಾಗಿ ಸರ್ಕಾರವು ಘೋಷಣೆ ಮಾಡಿ 8 ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳು ಇದುವರೆಗೂ ಕಾರ್ಯರೂಪಕ್ಕೆ ತರದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಸ್ವಾತಂತ್ರ್ಯ ಬಂದಾಗಿನಿಂದಲೂ ಇದುವರೆಗೂ ದಾಖಲೆ ಗ್ರಾಮವಾಗಿಯೇ ಉಳಿದಿದ್ದು, 605 ಮತದಾರರು ಹಾಗೂ 900 ಜನಸಂಖ್ಯೆಯಿರುವ ಚಿಕ್ಕ ಹೊಸಗಾವಿ ಗ್ರಾಮಕ್ಕೆ ಸೂಕ್ತ ಅನುದಾನಗಳು ಸಿಗದೇ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಗ್ರಾಮವು ಈ ರೀತಿ ಅಧಿಕಾರಿಗಳ ಉದಾಸೀನಕ್ಕೆ ಗುರಿಯಾಗುತ್ತಿರುವುದರ ಬಗ್ಗೆ ಬೇಸರಗೊಂಡು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿಗೌಡ ಅವರು ಹಲವು ವರ್ಷಗಳಿಂದ ತಹಶೀಲ್ದಾರ್‌, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು. ಪರಿಹಾರ ಸಿಗದ ಕಾರಣ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಮನವಿ ಸಲ್ಲಿಸಿ ‘ಕಂದಾಯ ಗ್ರಾಮ’ವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕೋರಿದ್ದಾರೆ.  

ADVERTISEMENT

‘ಗ್ರಾಮವನ್ನು ಎರಡು ಬಾರಿ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ್ದರೂ ತಾಲ್ಲೂಕು ಆಡಳಿತ ಅನುಷ್ಠಾನಕ್ಕೆ ಆಸಕ್ತಿ ತೋರಿಲ್ಲ. ಇದನ್ನು ಕೇಳಿದರೆ ಅನುದಾನದ ಕೊರತೆಯಿದೆ, ಇಬ್ಬರೇ ಭೂಮಾಪಕರು ಇರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾ ಅಲೆಸುತ್ತಿದ್ದಾರೆ’ ಎಂದು ಬಿ.ಎಸ್. ಗೌಡ ದೂರಿದರು. 

‘ಗ್ರಾಮದಲ್ಲಿ ಸಮರ್ಪಕವಾದ ರಸ್ತೆ ಹಾಗೂ ಚರಂಡಿಗಳಿಲ್ಲ, ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಸ್ವಚ್ಛತೆ ಮರೀಚಿಕೆಯಾಗಿದ್ದು ಅನೈರ್ಮಲ್ಯ ವಾತಾವರಣದಲ್ಲಿ ಗ್ರಾಮಸ್ಥರು ಬದುಕುವಂತಾಗಿದೆ. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೂ ಇಲ್ಲದಿರುವುದರಿಂದ ಗ್ರಾಮಸ್ಥರು ಬಸ್ ಅಥವಾ ಯಾವುದೇ ವಾಹನಕ್ಕಾಗಿ ಸುಮಾರು ಎರಡು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗುವ ಪರಿಸ್ಥಿತಿಯಿದೆ. ಇದರಿಂದಾಗಿ ಅಂಗವಿಕಲರಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಗ್ರಾಮದ ಮಹಿಳೆಯರು ಸಮಸ್ಯೆ ತೋಡಿಕೊಂಡರು. 

ಆರೋಗ್ಯ ಸಮಸ್ಯೆಗಳು ಬಂದಾಗ ಕೊಪ್ಪ ಸೇರಿದಂತೆ ಬೇರೆಡೆಗೆ ತೆರಳಬೇಕಾದ ಅನಿವಾರ್ಯತೆ ಎದುರಾದಾಗ ಸಮಸ್ಯೆ ಹೆಚ್ಚಾಗುತ್ತದೆ. ಗ್ರಾಮದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯೂ ಕೂಡಾ ಹಲವು ವರ್ಷಗಳಿಂದ ಬಾಗಿಲು ಮುಚ್ಚಿದೆ.

‘ಕಂದಾಯ ಗ್ರಾಮವನ್ನಾಗಿ ಮಾಡದೇ ಇರುವುದರಿಂದ ಗ್ರಾಮಸ್ಥರಿಗೆ ತಮ್ಮ ಜಮೀನಿನ ದಾಖಲೆಗಳು ಗ್ರಾಮದ ಹೆಸರಿನಲ್ಲಿ ರೈತರಿಗೆ ಸಮರ್ಪಕವಾಗಿ ಸಿಗದೇ ಸಮಸ್ಯೆಯಾಗಿದೆ. ಕೂಡಲೇ ಕಂದಾಯ ಗ್ರಾಮವನ್ನು ಈಗಾಗಲೇ ಸರ್ಕಾರವು ಗೆಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಸಂಬಂಧಪಟ್ಟ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾರ್ಯರೂಪಕ್ಕೆ ತರಲು ಅಧಿಕಾರಿಗಳ ನಿರ್ಲಕ್ಷ್ಯ

ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮವನ್ನು 2017 ಹಾಗೂ 2019ರಲ್ಲಿ ಎರಡು ಬಾರಿ ಕಂದಾಯ ಗ್ರಾಮವನ್ನಾಗಿ ಸರ್ಕಾರವು ಘೋಷಣೆ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಕಾರ್ಯರೂಪಕ್ಕೆ ತರದೇ ಬೇಜವಾಬ್ದಾರಿ ತೋರುತ್ತಿದ್ದಾರೆ.

– ಬೆಟ್ಟಸ್ವಾಮಿಗೌಡ ಗ್ರಾ.ಪಂ ಸದಸ್ಯ ಚಿಕ್ಕಹೊಸಗಾವಿ ಗ್ರಾಮ

ಬಸ್‌ ಇಲ್ಲದೆ ಜನರ ಪರದಾಟ

ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಕುಡಿಯುವ ನೀರೂ ಎಷ್ಟೋ ದಿನಕ್ಕೊಮ್ಮೆ ಬರುತ್ತದೆ. ಬಸ್‌ನಲ್ಲಿ ಹೋಗಬೇಕೆಂದರೆ 2 ಕಿ.ಮೀ ನಡೆಯಬೇಕು. ರಸ್ತೆಗಳು ಸರಿಯಿಲ್ಲದ ಕಾರಣ ವಯೋವೃದ್ಧರಿಗೆ ತೀವ್ರ ತೊಂದರೆಯಾಗುತ್ತಿದೆ

– ಚಿಕ್ಕ ತಾಯಮ್ಮ ಗ್ರಾಮಸ್ಥರು

ಪೂರಕ ಮಾಹಿತಿ ಪಡೆದು ಕ್ರಮ

ಚಿಕ್ಕಹೊಸಗಾವಿ ಗ್ರಾಮವನ್ನು ‘ಕಂದಾಯ ಗ್ರಾಮ’ವಾಗಿ ಅನುಷ್ಠಾನಕ್ಕೆ ತರುವ ಬಗ್ಗೆ ಅಗತ್ಯ ಅಧಿಕೃತ ಪೂರಕ ಮಾಹಿತಿಯನ್ನು ಪಡೆದು ಅಗತ್ಯ ಕ್ರಮವಹಿಸಲಾಗುವುದು

– ಸ್ಮಿತಾ ತಹಶೀಲ್ದಾರ್ ಮದ್ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.