ADVERTISEMENT

ಕಾಫಿ, ಬಿಸ್ಕತ್‌ಗಷ್ಟೇ ಸೀಮಿತವಾದ ತಾ.ಪಂ ಸಭೆ

ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಮರಿಯಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 9:41 IST
Last Updated 25 ಅಕ್ಟೋಬರ್ 2019, 9:41 IST
ಜಯಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ಲೆಕ್ಕ ಪರಿಶೋಧನಾ ಸಭೆ ನಡೆಯಿತು
ಜಯಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ಲೆಕ್ಕ ಪರಿಶೋಧನಾ ಸಭೆ ನಡೆಯಿತು   

ಮದ್ದೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಪ್ರಗತಿ ಪರಿಶೀಲನಾ ಸಭೆಯು ಕೇವಲ ಕಾಫಿ, ಬಿಸ್ಕತ್‌ಗಷ್ಟೇ ಸೀಮಿತವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಮರಿಯಪ್ಪ ದೂರಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ‘ಹಣಕಾಸು ಲೆಕ್ಕ ಪರಿಶೋಧನಾ, ಯೋಜನಾ ಸ್ಥಾಯಿ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಅಭಿವೃದ್ಧಿ ಕಾರ್ಯ ಗಳಿಗೆ ಒತ್ತು ನೀಡುತ್ತಿಲ್ಲ. ಜನರ ಕೆಲಸ ಗಳನ್ನು ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ಕಸದ ಸಮಸ್ಯೆ ಇದೆ. ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ADVERTISEMENT

ತಾ.ಪಂ. ಇಒ ಮುನಿರಾಜು ಮಾತನಾಡಿ, ‘ಸರ್ಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಜಯಲಕ್ಷ್ಮಮ್ಮ ಮಾತನಾಡಿ, ‘ಈಗಾಗಲೇ ಆಯಾ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.ಸಭೆಯಲ್ಲಿ ಸದಸ್ಯರಾದ ಲೀಲಾವತಿ, ಸುಮಾ ಕರಿಯಪ್ಪ, ದೇವೇಗೌಡ, ಮೋಹನ್, ಅಧಿಕಾರಿಗಳಾದ ಬಸವರಾಜು, ಮಂಜುನಾಥ್ ನಾಯಕ್, ಮಂಗಳಮ್ಮ, ಕವಿತಾ ಹಾಜರಿದ್ದರು.

ಗೌರವಧನ: ಅಧಿಕಾರಿ ಅಮಾನತಿಗೆ ಆಗ್ರಹ

ಕಳೆದ 9 ತಿಂಗಳಿಂದ ಸದಸ್ಯರ ₹3 ಲಕ್ಷ ಗೌರವ ಧನವನ್ನು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಗುರುಲಿಂಗಯ್ಯ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಗೌರವ ಧನವನ್ನು ಸದಸ್ಯರಿಗೆ ನೀಡುವಂತೆ ಸೂಚಿಸಿದ್ದರೂ ನೀಡುತ್ತಿಲ್ಲ. ಅವರನ್ನು ಅಮಾನತುಗೊಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಮುನಿರಾಜು, ‘ಗೌರವಧನ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.