
ಮದ್ದೂರು (ಮಂಡ್ಯ ಜಿಲ್ಲೆ): ‘ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಮಠ ನಿರ್ಮಿಸಿಕೊಡಿ’ ಎಂದು ತಾಲ್ಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದ 20ಕ್ಕೂ ಹೆಚ್ಚು ಯುವಕರು ಗ್ರಾಮ ಸಭೆಯಲ್ಲಿ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಆವರಣದಲ್ಲಿ ಯುವಕ ಪ್ರಸನ್ನ ನೇತೃತ್ವದಲ್ಲಿ ಪಂಚಾಯಿತಿ ಅಧ್ಯಕ್ಷೆ ಸುನಿತಾ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿ, ನೋವು ಹೇಳಿಕೊಂಡರು.
‘ರೈತ ಕುಟುಂಬದ ನಮಗೆ 35–40 ವರ್ಷವಾಗಿದ್ದರೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಹತಾಶೆಯಾಗಿದೆ. ಪೋಷಕರೂ ಪರಿತಪಿಸುತ್ತಿದ್ದಾರೆ’ ಎಂದು ಅಲವತ್ತುಕೊಂಡರು.
ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಲು ಬಂದಿದ್ದ ಗ್ರಾಮಸ್ಥರು ಹಾಗು ಅಹವಾಲು ಸ್ವೀಕರಿಸುತ್ತಿದ್ದ ಅಧಿಕಾರಿಗಳು ಯುವಕರು ‘ದುಮ್ಮಾನ’ ಕೇಳಿ ಕೆಲ ಹೊತ್ತು ಮೌನವಾದರು.
‘ಅರ್ಜಿಯನ್ನು ಪರಿಶೀಲಿಸಲಾಗುವುದು’ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.