ADVERTISEMENT

ಮಂಡ್ಯ | ‘ನಗರಸಭೆ’ಯಾಗಲಿದೆ ಮದ್ದೂರು

ಸಚಿವ ಸಂಪುಟ ಸಭೆಯ ನಿರ್ಣಯ: 4 ಗ್ರಾಮ ಪಂಚಾಯಿತಿಗಳು ಸೇರ್ಪಡೆ

ಸಿದ್ದು ಆರ್.ಜಿ.ಹಳ್ಳಿ
Published 24 ಮೇ 2025, 5:07 IST
Last Updated 24 ಮೇ 2025, 5:07 IST
ಮದ್ದೂರು ಪುರಸಭೆಯ ಕಟ್ಟಡ
ಮದ್ದೂರು ಪುರಸಭೆಯ ಕಟ್ಟಡ   

ಮಂಡ್ಯ: ಮದ್ದೂರು ಪುರಸಭೆಯನ್ನು ‘ನಗರಸಭೆ’ಯಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಮೇಲ್ದರ್ಜೆಗೇರಿಸುವ ನಿರ್ಣಯ ಕೈಗೊಂಡಿದೆ.

ಜಿಲ್ಲೆಯಲ್ಲಿ ಮಂಡ್ಯ ನಗರ ಮೊದಲ ಮತ್ತು ಏಕೈಕ ನಗರಸಭೆ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಇದೀಗ 2ನೇ ನಗರಸಭೆ ಎಂಬ ಖ್ಯಾತಿಯನ್ನು ಮದ್ದೂರು ಪುರಸಭೆ ಪಡೆದುಕೊಂಡಿದೆ. ಮದ್ದೂರು ನಗರಸಭೆ ವ್ಯಾಪ್ತಿಯಲ್ಲಿ 62,147 ಜನಸಂಖ್ಯೆ ಇರುವ ಕಾರಣ ಗ್ರೇಡ್‌–2 ನಗರಸಭೆಯಾಗಲಿದೆ. ಕಾರಣ 50 ಸಾವಿರದಿಂದ 1 ಲಕ್ಷದೊಳಗೆ ಜನಸಂಖ್ಯೆ ಇದ್ದರೆ ಗ್ರೇಡ್‌–2 ಸ್ಥಾನ ಸಿಗಲಿದೆ. 1 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇದ್ದರೆ ಗ್ರೇಡ್‌–1 ಸ್ಥಾನ ದೊರೆಯುತ್ತದೆ. 

ಮದ್ದೂರು ಮತ್ತು ಮಳವಳ್ಳಿ ಪುರಸಭೆಗಳನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕಾರಣಾಂತರಗಳಿಂದ ಮಳವಳ್ಳಿಗೆ ‘ನಗರಸಭೆ’ಯ ಭಾಗ್ಯ ದೊರೆತಿಲ್ಲ. ಮುಂದಿನ ದಿನಗಳಲ್ಲಿ ನಗರಸಭೆಯಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ.  

ADVERTISEMENT

ನಗರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮದ್ದೂರು ಪುರಸಭೆಯಲ್ಲಿ ಇದೇ ವರ್ಷ ಜನವರಿ 17ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೂ ಮುನ್ನ ಶಾಸಕ ಕೆ.ಎಂ. ಉದಯ್‌ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು. 

23 ವಾರ್ಡ್‌ಗಳು: 

ಮದ್ದೂರು ಪುರಸಭೆಯಲ್ಲಿ ಪ್ರಸ್ತುತ 23 ವಾರ್ಡ್‌ಗಳಿದ್ದು, ಪ್ರಸ್ತುತ ಆಡಳಿತ ಮಂಡಳಿಯ ಅಧಿಕಾರವಧಿ ನವೆಂಬರ್‌ವರೆಗೂ ಇದೆ. ಹಾಲಿ ಸದಸ್ಯರು ಅವಧಿ ಪೂರ್ಣಗೊಳ್ಳುವವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಮುಂದೆ ವಾರ್ಡ್‌ವಾರು ಮರು ವಿಂಗಡಣೆ, ವಾರ್ಡ್‌ವಾರು ಮೀಸಲಾತಿಯು ಕರ್ನಾಟಕ ಪುರಸಭೆ ಅಧಿನಿಯಮದ ಪ್ರಕಾರ ನಿಗದಿಯಾಗಲಿದೆ. 

ಅನುದಾನ ಹೆಚ್ಚಳ: 

‘ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ಎಸ್‌.ಎಫ್‌.ಸಿ. ಅನುದಾನ, 15ನೇ ಹಣಕಾಸು ಆಯೋಗದ ಅನುದಾನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರ ಅನುದಾನ ಸೇರಿದಂತೆ ಶೇ 30ರಷ್ಟು ಅನುದಾನ ಮದ್ದೂರು ನಗರಸಭೆಗೆ ಹೆಚ್ಚಳವಾಗಲಿದೆ. ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳ ತಲಾದಾಯ ಉದ್ಯೋಗಾವಕಾಶ ಹೆಚ್ಚಾಗಲಿದೆ. ಒಳಚರಂಡಿ, ಬೀದಿದೀಪ, ಕುಡಿಯುವ ನೀರು, ಆಧುನಿಕ ಸೌಕರ್ಯಗಳು ಸೇರ್ಪಡೆಯಾಗಲಿರುವ ಗ್ರಾಮ ಪಂಚಾಯಿತಿ ಜನರಿಗೆ ದೊರಕಲಿವೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೆ.ಮಾಯಣ್ಣಗೌಡ ತಿಳಿಸಿದರು. 

‘ನಗರಸಭೆ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ದಿನಗಳಲ್ಲಿ ‘ನರೇಗಾ’ ಸೌಲಭ್ಯ ಸಿಗುವುದಿಲ್ಲ. ನಿವಾಸಿಗಳಿಗೆ ‘ಗ್ರಾಮೀಣ’ ಕೋಟಾ ಕೈತಪ್ಪಲಿದೆ. ಗ್ರಾಮ ಪಂಚಾಯಿತಿಯಲ್ಲಿದ್ದಾಗ ವಿಧಿಸುತ್ತಿದ್ದ ತೆರಿಗೆಗಿಂತ ನಗರಸಭೆ ವಿಧಿಸುವ ತೆರಿಗೆಯ ಭಾರ ಜನರ ಮೇಲೆ ಬೀಳಬಹುದು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. 

ಹುದ್ದೆಗಳ ಸೃಜನೆ: 

ಮದ್ದೂರು ಪುರಸಭೆಯಲ್ಲಿ ಗ್ರೇಡ್‌ ಬಿ–2, ಗ್ರೇಡ್‌–ಸಿ 38, ಗ್ರೇಡ್‌ ಡಿ– 65 ಹುದ್ದೆಗಳು ಮಂಜೂರಾಗಿದ್ದು, ಗ್ರೇಡ್‌ ಬಿ–1, ಗ್ರೇಡ್‌ ಸಿ–9, ಗ್ರೇಡ್‌ ಡಿ–46 ಹುದ್ದೆಗಳಲ್ಲಿ ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ, 49 ಹುದ್ದೆಗಳಲ್ಲಿ ಕಾಯಂ ನೌಕರರ ಕೊರತೆ ಇದೆ. ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಹಾಗೂ ದಿನಗೂಲಿ ಆಧಾರದಲ್ಲಿ 29 ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ನಗರಸಭೆಯಾಗಿ ಕಾರ್ಯಾರಂಭಗೊಂಡ ನಂತರ ಒಟ್ಟು 236 ಕಾಯಂ ಹುದ್ದೆಗಳು ಮಂಜೂರಾಗುವ ಸಾಧ್ಯತೆ ಇದೆ. 

ಉದಯ್‌ ಕೆ.ಎಂ.
ಕುಮಾರ
ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿಸುವ ಕನಸು ಈಡೇರಿದೆ. ಮುಂದಿನ ಪ್ರಕ್ರಿಯೆಗಳು ಶೀಘ್ರದಲ್ಲೇ ಆರಂಭವಾಗಲಿದ್ದು ಕನಿಷ್ಠ ಒಂದು ವರ್ಷದಲ್ಲಿ ಪೂರ್ಣ ಸ್ವರೂಪ ಪಡೆಯಲಿದೆ
– ಕೆ.ಎಂ.ಉದಯ ಮದ್ದೂರು ಶಾಸಕ
ವೇಗವಾಗಿ ಬೆಳೆಯುತ್ತಿರುವ ಮದ್ದೂರು ಪಟ್ಟಣ 'ನಗರಸಭೆ'ಯಾಗುವ ಎಲ್ಲ ಅರ್ಹತೆ ಹೊಂದಿದೆ. ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಉದ್ಯೋಗ ಸೃಷ್ಟಿಯಾಗಿ ಜನರಿಗೆ ಅನುಕೂಲವಾಗಲಿದೆ
–ಕುಮಾರ ಜಿಲ್ಲಾಧಿಕಾರಿ ಮಂಡ್ಯ

8 ಗ್ರಾಮಗಳ ಸೇರ್ಪಡೆ ಸ್ಥಳೀಯ ಪುರಸಭೆಯು ನಗರಸಭೆಯಾಗಲು ಕನಿಷ್ಠ 50 ಸಾವಿರ ಜನಸಂಖ್ಯೆ ಹೊಂದಿರಬೇಕು. ಹೀಗಾಗಿ ನೂತನ ನಗರಸಭೆ ವ್ಯಾಪ್ತಿಗೆ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಸೋಮನಹಳ್ಳಿ ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಈ 4 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಈ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಚಾಮನಹಳ್ಳಿ ದೇಶಹಳ್ಳಿ ರುದ್ರಾಕ್ಷಿಪುರ ಸೋಮನಹಳ್ಳಿ ಕೆ.ಕೋಡಿಹಳ್ಳಿ ಅಗರಲಿಂಗನದೊಡ್ಡಿ ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಈ 8 ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಬರಲಿವೆ. 

ನಗರ ಸ್ಥಳೀಯ ಸಂಸ್ಥೆಗಳ ವಿವರ  ತಾಲ್ಲೂಕು;ಸ್ಥಾನ ಮಂಡ್ಯ;ನಗರಸಭೆ ಮದ್ದೂರು;ನಗರಸಭೆ ಮಳವಳ್ಳಿ;ಪುರಸಭೆ ಕೆ.ಆರ್‌.ಪೇಟೆ;ಪುರಸಭೆ ನಾಗಮಂಗಲ;ಪುರಸಭೆ ಪಾಂಡವಪುರ;ಪುರಸಭೆ ಶ್ರೀರಂಗಪಟ್ಟಣ;ಪುರಸಭೆ  ಬೆಳ್ಳೂರು;ಪಟ್ಟಣ ಪಂಚಾಯಿತಿ  

ಮದ್ದೂರು ನಗರಸಭೆಯ ಚಿತ್ರಣ  ಪ್ರಸ್ತುತ ವಾರ್ಡ್‌; 23 ಸೇರ್ಪಡೆಯಾಗಲಿರುವ ಗ್ರಾ.ಪಂ; 4 ಜನಸಂಖ್ಯೆ;62147 ಜನಸಾಂದ್ರತೆ;6364 ಪ್ರತಿ ಚ.ಕಿ.ಮೀ.ಗೆ ಭೌಗೋಳಿಕ ವಿಸ್ತೀರ್ಣ;35.58 ಚ.ಕಿ.ಮೀ ತೆರಿಗೆ ಸ್ವೀಕೃತಿ;₹4.06 ಕೋಟಿ ತೆರಿಗೇತರ ಸ್ವೀಕೃತಿ;₹2.86 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.