ADVERTISEMENT

ಮಂಡ್ಯ: ಶಿವನ ದರ್ಶನ ಪಡೆದು ಪುನಿತರಾದ ಭಕ್ತಗಣ

ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಗಂಗಾಜಲ ಅಭಿಷೇಕ, ಭಕ್ತರಿಗೆ ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:38 IST
Last Updated 11 ಮಾರ್ಚ್ 2021, 16:38 IST
ಶಂಕರಮಠದ ಗಂಗಾಧರೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಉತ್ಸವಗಳು ನಡೆದವು
ಶಂಕರಮಠದ ಗಂಗಾಧರೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಉತ್ಸವಗಳು ನಡೆದವು   

ಮಂಡ್ಯ: ಶಿವರಾತ್ರಿ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯ ಭಕ್ತರು ಗುರುವಾರ ಶಿವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾದರು.

ಎಲ್ಲಾ ದೇವಾಲಯಗಳಲ್ಲಿ ಗುರುವಾರ ನಸುಕಿನಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶಿವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಗರದ ಗುತ್ತಲು ಬಡಾವಣೆಯ ಅರಕೇಶ್ವರ ದೇವಾಲಯದಲ್ಲಿ ನಸುಕಿನ 3 ಗಂಟೆಯ ಸಮಯದಲ್ಲಿ ದೇವರಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಹಾಲು, ಮೊಸಲು, ಜೇನು, ಕಲ್ಲು ಸಕ್ಕರೆ ಅಭಿಷೇಕ ನೆರವೇರಿಸಿ, ಪಂಚಾಮೃತ ನೈವೇದ್ಯ ಅರ್ಪಿಸಲಾಯಿತು.

ಅರಕೇಶ್ವರನಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಬೆಳಿಗ್ಗೆ 6 ಗಂಟೆಯಿಂದ ಭಕ್ತರ ದರುಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮುಂಜಾನೆ 5 ಗಂಟೆಗೇ ಬಂದು ಭಕ್ತರು ಸಾಲುಗಟ್ಟಿ ನಿಂತಿದ್ದರು. ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು. ದೇವಾಲಯದ ಆವರಣದಲ್ಲಿ ಜಾತ್ರೆಯ ವಾತಾವರಣ ಮನೆ ಮಾಡಿತ್ತು. ಪೂಜಾ ಸಾಮಗ್ರಿ, ಮಕ್ಕಳ ಆಟಿಕೆ, ಸಿಹಿ ತಿನಿಸು ಮಾರಾಟ ಮಾಡುವ ಅಂಗಡಿಕಾರರು ಬುಧವಾರ ಸಂಜೆಯಿಂದಲೇ ಟೆಂಟ್‌ ಹಾಕಿದ್ದರು.

ADVERTISEMENT

ಮುಜರಾಯಿ ಇಲಾಖೆಯಿಂದ ತಂದಿದ್ದ ಗಂಗಾಜಲದಲ್ಲಿ ದೇವರಿಗೆ ಐದು ಬಾರಿ ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ 6 ಗಂಟೆಯಲ್ಲಿ ಗಂಗಾಜಲ ಅಭಿಷೇಕ ನೆರವೇರಿಸಿ ಭಕ್ತರಿಗೆ ಪ್ರವೇಶ ಕಲ್ಪಿಸಲಾಯಿತು. ನಂತರ ಬೆಳಿಗ್ಗೆ 8 ಗಂಟೆಗೊಮ್ಮೆ ದೇವರಿಗೆ ಗಂಗಾಜಲದಲ್ಲಿ ಅಭಿಷೇಕ ಮಾಡಲಾಯಿತು. ನಂತರ ಬೆಳಿಗ್ಗೆ 10, 11, ಮಧ್ಯಾಹ್ನ 12, ಸಂಜೆ 6ಗಂಟೆಯಲ್ಲಿ ಅಭಿಷೇಕ ನೆರವೇರಿಸಲಾಯಿತು.

ಹರಕೆ ಹೊತ್ತಿದ್ದ ಭಕ್ತರು, ಸೇವಾದಾರರು ವಿವಿಧ ಧಾರ್ಮಿಕ ಸಮಾರಂಭ ನಡೆಸಿದರು. ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು. ದೇವಾಲಯಕ್ಕೆ ಬಂದ ಭಕ್ತರ ನಿರ್ವಹಣೆಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ದೇವಾಲಯಕ್ಕೆ ಬಿಗಿ ಬಂದೋಬಸ್ತ್‌ ವಹಿಸಿದ್ದರು.

‘ಶಿವರಾತ್ರಿ ದಿನ ಅರಕೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಶಿವರಾತ್ರಿ ದಿನ, ರಾತ್ರಿಯಿಡೀ ದೇವರ ದರ್ಶನ ಪಡೆಯುತ್ತಾರೆ’ ಎಂದು ಅರ್ಚಕ ಶಂಕರ್‌ ತಿಳಿಸಿದರು.

ಪೇಟೆಬೀದಿಯ ಸಕಲೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಭಕ್ತರು ದರ್ಶನ ಪಡೆದರು. ಸಂಜೆ 4 ಗಂಟೆಯಿಂದ ಶುಕ್ರವಾರ ಬೆಳಿಗ್ಗೆವರೆಗೂ ಜಾಗರಣೆ, ವಿಶೇಷ ಪೂಜೆ ನಡೆದವು. ಕಲ್ಲಹಳ್ಳಿಯ ರಾಮಲಿಂಗೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ನಂತರ ಹಾಲಿನ ಅಭಿಷೇಕ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ಕಲ್ಲಹಳ್ಳಿಯ ಶ್ರೀಕಂಠೇಶ್ವರ ದೇವಾಲಯ, ಗಾಂಧಿನಗರದ ಮಲೆ ಮಹದೇಶ್ವರ ದೇವಾಲಯ, ವಿದ್ಯಾನಗರದ ಶಂಭುಲಿಂಗೇಶ್ವರ ದೇವಾಲಯ, ಶಂಕರಮಠ ಆದಿಚುಂಚನಗಿರಿ ಮಠದ ಗಂಗಾಧರೇಶ್ವರ ದೇವಾಲಯ, ನೂರು ಅಡಿ ರಸ್ತೆಯ ಕನ್ನಿಕಾಪರಮೇಶ್ವರಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಜಾಗರಣೆ: ಶಿವರಾತ್ರಿ ಜಾಗರಣೆ ಅಂಗವಾಗಿ ದೇವಾಲಯದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರಕೇಶ್ವರ ದೇವಾಲಯದ ಮುಂಭಾಗದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಬೇರೆಬೇರೆ ದೇವಾಲಯಗಳಲ್ಲಿ ಭಜನೆ, ವಚನ ಗಾಯನ, ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ಭಕ್ತರನ್ನು ಕಾಡಿತು. ಬುಧವಾರದವರೆಗೆ ಮಾರು ಸೇವಂತಿಗೆ ಹೂವು ₹ 30– 40 ಇತ್ತು. ಆದರೆ ಗುರುವಾರ ಬೆಳಿಗ್ಗೆ ಮಾರು ಸೇವಂತಿಗೆ ಬೆಲೆ ₹ 100ಕ್ಕೆ ಹೆಚ್ಚಾಗಿತ್ತು. ಏಲಕ್ಕಿ ಬಾಳೆಹಣ್ಣು ಕೂಡ ಕೆ.ಜಿಗೆ ₹ 60ಕ್ಕೆ ಏರಿಕೆ ಕಂಡಿತ್ತು.

***

ಇಂದು ಅನ್ನ ಸಂತರ್ಪಣೆ
ಶಿವರಾತ್ರಿ ಜಾಗರಣೆ ಪೂರ್ಣಗೊಂಡ ಮರುದಿನ (ಶುಕ್ರವಾರ) ವಿವಿಧ ದೇವಾಲಯಗಳಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಭಕ್ತರು ಉಪವಾಸವಿದ್ದು ಜಾಗರಣೆ ಆಚರಣೆ ಮಾಡಿದ್ದು ಮುಂಜಾನೆಯೇ ಅನ್ನ ಪ್ರಸಾದ ಸ್ವಿಕಾರ ಮಾಡುತ್ತಾರೆ. ವಿವಿಧ ದೇವಾಲಯಗಳಲ್ಲಿ ನಸುಕಿನಲ್ಲಿಯೇ ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ.

ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಮುನೇಶ್ವರ ಸ್ವಾಮಿ ದೇವಾಲಯ, ಹೊಸಹಳ್ಳಿ ಬಡಾವಣೆಯಲ್ಲಿರುವ ಶನೀಶ್ವರ ದೇವಾಲಯ ಅರಕೇಶ್ವರ ದೇವಾಲಯ, ಕಲ್ಲಹಳ್ಳಿಯ ಶ್ರೀಕಂಠೇಶ್ವರ ದೇವಾಲಯ, ನೂರು ಅಡಿರಸ್ತೆಯ ಶನೀಶ್ವರ ದೇವಾಲಯದಲ್ಲೂ ಅನ್ನ ಸಂತರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.