ನಾಗಮಂಗಲ: ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಸೇರಿದಂತೆ ಸಾಹಿತ್ಯ ಎಲ್ಲವೂ ಅತ್ಯಂತ ಸ್ಮರಣೀಯ. ಆ ನಿಟ್ಟಿನಲ್ಲಿ ಪರಂಪರೆ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಿವಮೊಗ್ಗ ಕೊಮ್ಮನಾಳು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸುಷ್ಮಾ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವರ 80ನೇ ವರ್ಷದ ಜಯಂತ್ಯುತ್ಸವ ಮತ್ತು 12ನೇ ವರ್ಷದ ಪುಣ್ಯಸ್ಮರಣಾ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ಸಂಸ್ಕೃತಿಯ ರಮಣೀಯತೆ ನಾಡಾಗಿರುವ ಕರ್ನಾಟಕದಲ್ಲಿ ನಾವೆಲ್ಲಾ ವಿದ್ಯಾಭ್ಯಾಸ ಮಾಡುತ್ತಿರುವುದು ಸಂತಸ ಪಡುವ ವಿಚಾರ. ಮಕ್ಕಳಾದ ನಾವು ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ರಾಮಾಯಣ, ಮಹಾಭಾರತದಂತಹ ಗ್ರಂಥ ಓದುವ ಮೂಲಕ ಸುಸಂಸ್ಕೃತರಾಗಬೇಕು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಎಸ್.ಟಿ.ಜಿ ಪದವಿ ಪೂರ್ವ ಕಾಲೇಜಿನ ಕು.ಕೆ.ಎಂ.ಅಪೇಕ್ಷಾ ಮಾತನಾಡಿ, ಮಹಾಭಾರತವನ್ನು ನಾವು ಅಧ್ಯಯನ ಮಾಡುವುದರಿಂದ ಬದುಕಿನ ಸಾರ ಮತ್ತು ಜ್ಞಾನ ಗ್ರಹಿಸಿ ಅಭಿವ್ಯಕ್ತಗೊಳಿಸಬಹುದಾಗಿದೆ. ಮಹಾಭಾರತ ಅತ್ಯಂತ ಶ್ರೇಷ್ಠ ಗ್ರಂಥವಾಗಿದ್ದು, ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಹಿಂದುಗಳ ಎರಡು ಕಣ್ಣುಗಳಿದ್ದಂತೆ ಎಂದರು.
ಮಕ್ಕಳಲ್ಲಿ ಸಾಹಿತ್ಯದ ಬೇರು ಹುಟ್ಟಿದಾಗ ಮಾತ್ರ ಸಾಹಿತ್ಯಲೋಕ ಬಲಿಷ್ಠಗೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯವು ಮನುಷ್ಯನ ಬದುಕಿನಲ್ಲಿ ವಿಶ್ವಾಸ ತುಂಬಿಸುತ್ತದೆ.ನಾಡೋಜ ಗೊ.ರು.ಚನ್ನಬಸಪ್ಪ
ನಂತರ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ನಾಡ ಧ್ವಜಾರೋಹಣವನ್ನು ಮಂಡ್ಯದ ಚಿನ್ಮಯಿ ವಿದ್ಯಾ ಸಂಸ್ಥೆಯ ಮೃಡಾನಿ ಎಸ್.ಪಾಟೀಲ್ ಮತ್ತು ರಾಷ್ಟ್ರ ಧ್ವಜಾರೋಹಣವನ್ನು ಬೆಂಗಳೂರಿನ ಮಲ್ಲೇಶ್ವರಂ ಕ್ಲೂನಿ ಕಾನ್ವೆಂಟ್ ಹೈಸ್ಕೂಲ್‌ನ ವಿದ್ಯಾರ್ಥಿ ವೈನವಿ ನೆರೆವೇರಿಸಿದರು.
ಸಮ್ಮೇಳನದಲ್ಲಿ ವಿಚಾರ ಗೋಷ್ಠಿ ಅಧ್ಯಕ್ಷತೆಯನ್ನು ಸಾಗರದ ಅವಿನಹಳ್ಳಿ ಸರ್ಕಾರಿ ಪ್ರೌಢಶಾಲೆ ಬಿ.ಬಿಂದು ವಹಿಸಿದ್ದರು. ಕವಿಗೋಷ್ಠಿ, ಹನಿಗವನ, ಚುಟುಕ ಗೋಷ್ಠಿ ಅಧ್ಯಕ್ಷತೆಯನ್ನು ಸಿದ್ದಾಪುರದ ಸರಸ್ವತಿ ವಿದ್ಯಾಲಯದ ವಿಧಾತ್ರಿ ರವಿಶಂಕರ್, ಕಥಾ ಗೋಷ್ಠಿಯ ಅಧ್ಯಕ್ಷತೆಯನ್ನು ಕಲಬುರ್ಗಿಯ ಅಜೀಮ್ ಪ್ರೇಮ್‌ಜಿ ಶಾಲೆ ಪ್ರೀತಮ್ ವಹಿಸಿದ್ದರು.
ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಚಾ.ನಾ.ಅಶೋಕ್, ಮಂಡ್ಯ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಎಂ.ಎನ್.ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಬೆಂಗಳೂರು ನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಮೂರ್ತಿ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ದಾವಣಗೆರೆ ಸರ್.ಎಂ.ವಿ.ಕಾಲೇಜಿನ ನಿಶ್ಚಿತಾ ಎಂ.ಶೆಟ್ಟಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಎ.ಟಿ.ಶಿವರಾಮು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.