ಮಳವಳ್ಳಿ: ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ವಿರುದ್ಧ 12 ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕೆಲ ಪಕ್ಷೇತರರು ಸೇರಿದಂತೆ 12 ಸದಸ್ಯರು ಜುಲೈ 17ರಂದು ಅಧ್ಯಕ್ಷ ಪುಟ್ಟಸ್ವಾಮಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಶನಿವಾರ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಭೆ ಕರೆದಿದ್ದರು. ಆದರೆ ಪತ್ರಕ್ಕೆ ಸಹಿ ಮಾಡಿದ್ದ 12 ಸದಸ್ಯರ ಪೈಕಿ 7 ಮಂದಿ ಮಾತ್ರ ಗೊತ್ತುವಳಿ ಸಭೆಗೆ ಹಾಜರಾದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಅವಿಶ್ವಾಸ ನಿರ್ಣಯ ಮಂಡನೆಯನ್ನು ಕೈಬಿಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ತಿಳಿಸಿದರು.
ಇನ್ನೂ ಎರಡೂವರೆ ತಿಂಗಳು ಮಾತ್ರ ಅವಧಿ ಉಳಿದಿರುವುದರಿಂದ ಪುಟ್ಟಸ್ವಾಮಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದ ಜೆಡಿಎಸ್ ಸದಸ್ಯ ಟಿ.ನಂದಕುಮಾರ್ ಮಾತನಾಡಿ, ‘ಹಿಂದಿನಿಂದಲೂ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರರು ಸೇರಿ ಮೈತ್ರಿಕೂಟ ರಚನೆ ಮಾಡಿಕೊಂಡು ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿತ್ತು. 9 ತಿಂಗಳ ಹಿಂದೆ ಅಧ್ಯಕ್ಷರಾಗಿ ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ ಎನ್.ಬಸವರಾಜು ಅವರನ್ನು ಆಯ್ಕೆ ಮಾಡಲಾಗಿತ್ತು. ಆರು ತಿಂಗಳು ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದವು. ಆದರೆ ಸಹಿ ಮಾಡಿದ ಕೆಲ ಸದಸ್ಯರು ಶಾಸಕರ ಅನೈತಿಕ ರಾಜಕರಣದಿಂದ ಸಭೆಗೆ ಗೈರಾಗಿರುವುದರಿಂದ ನಮಗೆ ಹಿನ್ನಡೆಯಾಯಿತು’ ಎಂದು ಹೇಳಿದರು.
‘ಪಟ್ಟಣದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದ ಶಾಸಕರು ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದಾರೆ’ ಎಂದು ದೂರಿದರು.
ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ‘ಅಧ್ಯಕ್ಷ ಪುಟ್ಟಸ್ವಾಮಿ ಸದಸ್ಯರ ವಿಶ್ವಾಸ ಕಳೆದುಕೊಂಡು ತಮ್ಮ ಕಚೇರಿಯನ್ನು ರಿಯಲ್ ಎಸ್ಟೇಟ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿ ಅಗೌರವ ತೋರಿದ್ದಾರೆ’ ಎಂದು ಆರೋಪಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಸದಸ್ಯರಾದ ಎಂ.ಟಿ.ಪ್ರಶಾಂತ್, ಆರ್.ಎನ್.ಸಿದ್ದರಾಜು, ನಾಗೇಶ್, ನೂರುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.