ADVERTISEMENT

ಮಳವಳ್ಳಿ | ಬಸ್ ಹರಿಸಿ ಕೊಲ್ಲಲು ಯತ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:39 IST
Last Updated 9 ಸೆಪ್ಟೆಂಬರ್ 2024, 15:39 IST
   

ಮಳವಳ್ಳಿ: ಕೆಎಸ್‌ಆರ್‌ಟಿಸಿ ಬಸ್ ಚಾಲಕ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಸಾರಿಗೆ ಬಸ್ ಡಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಕೇಳಿಬಂದಿದೆ.

ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ತಾಲ್ಲೂಕಿನ ಬಸವನಪುರ ಗೇಟ್ ಬಳಿ ಬೈಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಬೈಕ್ ಸವಾರ ತಳಗವಾದಿ ಯೋಗೇಶ್ ಮತ್ತು ಹಿಂಬದಿ ಸವಾರ ಚೌಡಯ್ಯ ಗಾಯಗೊಂಡಿದ್ದಾರೆ.

ಚಾಲಕ ಹನುಮಂತು ತಳಗವಾದಿ ಗ್ರಾಮದವರೇ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಕ್ಷುಲ್ಲಕ ವಿಚಾರಕ್ಕೆ ಮದ್ದೂರು ತಾಲ್ಲೂಕಿನ ಕೆ.ಪಿ.ದೊಡ್ಡಿ ಬಳಿ ಯೋಗೇಶ್ ಹಾಗೂ ಹನುಮಂತು ನಡುವೆ ಗಲಾಟೆ ನಡೆದು ಕೆ.ಎಂ.ದೊಡ್ಡಿ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಾಗಿತ್ತು. ನಂತರ ಗ್ರಾಮದಲ್ಲಿ ಎರಡೂ ಕುಟುಂಬದವರ ನಡುವೆ ಮತ್ತೊಂದು ಗಲಾಟೆ ನಡೆದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಯೋಗೇಶ್, ಸೋಮವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಮಳವಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮಂಡ್ಯ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ಚಾಲನೆ ಮಾಡಿಕೊಂಡು ಬಂದ ಹನುಮಂತು ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಹಿಂಬದಿ ಸವಾರ ಚೌಡಯ್ಯ ಅವರಿಗೆ ಪಕ್ಕೆಲುಬಿಗೆ ಹಾಗೂ ಯೋಗೇಶ್ ಕಾಲಿಗೆ ಗಾಯವಾಗಿದೆ. ‘ಬಸ್‌ ಚಾಲಕ ಕೊಲ್ಲುವ ಉದ್ದೇಶದಿಂದಲೇ ಅಪಘಾತ ಮಾಡಿದ್ದಾರೆ’ ಎಂದು ಗಾಯಾಳು ಯೋಗೇಶ್ ಆರೋಪಿಸಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಸಾರಿಗೆ ಬಸ್ ವಶಕ್ಕೆ ಪಡೆದುಕೊಂಡು ಗಾಯಗೊಂಡಿರುವ ಯೋಗೇಶ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರಾತ್ರಿವರೆಗೂ ಪ್ರಕರಣ ದಾಖಲಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.