ADVERTISEMENT

ಮಳವಳ್ಳಿ ಪಟ್ಟಣ: ಅನುದಾನಕ್ಕಾಗಿ ಶಾಸಕ ಡಾ.ಕೆ.ಅನ್ನದಾನಿ ಮನವಿ

ಪುರಸಭೆ ವ್ಯಾಪ್ತಿಯ ಬಡಾವಣೆಗಳಿಗೆ ಮೂಲ ಸೌಲಭ್ಯವಿಲ್ಲ, ರಸ್ತೆಗಳು ಡಾಂಬರ್‌ ಕಂಡಿಲ್ಲ

ಟಿ.ಕೆ.ಲಿಂಗರಾಜು
Published 8 ಫೆಬ್ರುವರಿ 2021, 4:56 IST
Last Updated 8 ಫೆಬ್ರುವರಿ 2021, 4:56 IST
ಮಳವಳ್ಳಿ ಪಟ್ಟಣದ 3ನೇ ವಾರ್ಡ್‌ನಲ್ಲಿ ಡಾಂಬರ್‌ ಕಾಣದ ರಸ್ತೆ, ರಸ್ತೆ ಪಕ್ಕದಲ್ಲೇ ಕಸ ಸುರಿದಿರುವುದು
ಮಳವಳ್ಳಿ ಪಟ್ಟಣದ 3ನೇ ವಾರ್ಡ್‌ನಲ್ಲಿ ಡಾಂಬರ್‌ ಕಾಣದ ರಸ್ತೆ, ರಸ್ತೆ ಪಕ್ಕದಲ್ಲೇ ಕಸ ಸುರಿದಿರುವುದು   

ಮಳವಳ್ಳಿ: ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿರುವ ಮಳವಳ್ಳಿ ಪಟ್ಟಣ ರೂಪುಗೊಂಡು ಇನ್ನೇನು ಶತಮಾನೋತ್ಸವ ಸಮೀಪಿಸುತ್ತಿದ್ದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುತ್ತಿದ್ದರು ಎನ್ನಲಾದ ಐತಿಹಾಸಿಕ ಹಿನ್ನೆಲೆ ಮಳವಳ್ಳಿ ಪಟ್ಟಣಕ್ಕಿದೆ. ಹೊರವಲಯದ ಉಗ್ರಾಣಪುರದದೊಡ್ಡಿ ಪಟ್ಟಣ ವ್ಯಾಪ್ತಿಗೆ ಬಂದರೂ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ. ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಅಗೆಯಲಾಗಿದ್ದ ಗುಂಡಿಗಳು ಪಟ್ಟಣದ ಅಂದಗೆಡಿಸಿದ್ದು, ಇದು ಪಟ್ಟಣವೋ ಹಳ್ಳಿಯೋ ಎಂಬ ಪ್ರಶ್ನೆ ಮೂಡಿಸುತ್ತದೆ.

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಎನ್.ಇ.ಎಸ್ ಬಡಾವಣೆ ರೂಪುಗೊಂಡು ಹಲವು ವರ್ಷಗಳು ಕಳೆದರೂ ರಸ್ತೆಗೆ ಡಾಂಬರ್‌ ಕಂಡಿಲ್ಲ. 1930ರಲ್ಲಿ ರಚಿತವಾದ ಪಟ್ಟಣದ ಪುರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಇನ್ನೂ ಸಮರ್ಪಕ ರಸ್ತೆ ಹಾಗೂ ಒಳಚರಂಡಿ ನಿರ್ಮಾಣವಾಗದೆ ಜನರು ಪರದಾಟ ನಡೆಸುವಂತಾಗಿದೆ.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ವಾಸವಿದ್ದು, ಪಟ್ಟಣವನ್ನು 1ರಿಂದ 23 ವಾರ್ಡ್‌ಗಳಾಗಿ ಪರಿವರ್ತನೆ ಮಾಡಿ 25 ವರ್ಷ ಕಳೆದರೂ ವಾರ್ಡ್‌ನ ಕೆಲ ರಸ್ತೆಗಳು ಇನ್ನೂ ಡಾಂಬರ್‌ ಕಂಡಿಲ್ಲ. ಹೀಗಾಗಿ ಹಲವು ಜನರಿಂದ ಆಯ್ಕೆಯಾಗಿ ಅಧಿಕಾರ ನಡೆಸುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಪುರಸಭೆ ಚುನಾವಣೆ ನಡೆದು ಎರಡು ವರ್ಷಗಳ ನಂತರ ಕಳೆದ ಎರಡು ತಿಂಗಳ ಹಿಂದೆ ಸದಸ್ಯರಿಗೆ ಅಧಿಕಾರ ಸಿಕ್ಕಿದ್ದು, ಅಧ್ಯಕ್ಷೆ ರಾಧಾ ನಾಗರಾಜು ಹಾಗೂ ಉಪಾಧ್ಯಕ್ಷ ಟಿ.ನಂದಕುಮಾರ್ ಅವರಿಗೆ ಪಟ್ಟಣದಲ್ಲಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಸವಾಲಾಗಿದೆ.

7ನೇ ವಾರ್ಡಿನ ಕೋರ್ಟ್ ಪಕ್ಕದ ರಸ್ತೆ ಮೂಲಕ ಹಳೆಯ ಕೋರ್ಟ್ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಈ ಭಾಗದ ಜನ ಬೇಡಿಕೆ ಇಟ್ಟಿದ್ದಾರೆ. ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಹೋಗುವ ರಸ್ತೆ ಇದುವರೆಗೂ ಡಾಂಬರೀಕರಣಗೊಂಡಿಲ್ಲ. ವಾರ್ಡಿನಲ್ಲಿ ಬಹುತೇಕ ಕಾಲುದಾರಿಗಳಿವೆ. ಮಳೆಗಾಲದಲ್ಲಿ ಅರ್ಧ ಕಾಲು ಹೂತು ಹೋಗುವಷ್ಟು ಕೆಸರಿದ್ದು ಮಕ್ಕಳಿಗೆ, ಹಿರಿಯರಿಗೆ ಓಡಾಡುವುದು ಕಷ್ಟವಾಗಿದೆ.

18ನೇ ವಾರ್ಡ್‌ನಲ್ಲಿ ಮಹದೇವಸ್ವಾಮಿ ಎಂಬುವವರ ಮನೆಯಿಂದ ಕನಕಪುರ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಣದೇ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಸಮರ್ಪಕವಾಗಿ ಒಳಚರಂಡಿ ನಿರ್ಮಾಣವಾಗದೆ ಇರುವುದರಿಂದ ಮಳೆ ಬಂದ ಸಂದರ್ಭದಲ್ಲಿ ನೀರು ರಸ್ತೆ ತುಂಬೆಲ್ಲ ನಿಲ್ಲುತ್ತದೆ.

20, 21, ಹಾಗೂ 22 ವಾರ್ಡ್‌ನಲ್ಲಿ ಬಹುತೇಕ ರಸ್ತೆಗಳು ಮಣ್ಣಿನಿಂದ ಕೂಡಿವೆ. ಇಲ್ಲಿನ ರಸ್ತೆಗಳು ಅಭಿವೃದ್ಧಿ ಕಾಣದೆ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ರಸ್ತೆಗಳೂ ಕಿತ್ತುಬಂದಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. 22ನೇ ವಾರ್ಡ್‌ನ ಸ್ಮಶಾನ ಅವ್ಯವಸ್ಥೆಯಿಂದ ಕೂಡಿದ್ದು, ಇದಕ್ಕೆ ಕಾಂಪೌಂಡ್ ನಿರ್ಮಾಣದ ಅವಶ್ಯಕತೆ ಇದೆ.

ಪಟ್ಟಣದ ಕೆರೆ ಮುಂಭಾಗದ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯಿಂದ ತಮ್ಮಡಹಳ್ಳಿ ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ಈ ರಸ್ತೆಯಲ್ಲಿಯೇ ಸ್ಮಶಾನವಿದ್ದು, ಅಕ್ಕ-ಪಕ್ಕದಲ್ಲಿಯೇ ವಾಹನಗಳನ್ನು ಕೆಲವರು ನಿಲ್ಲಿಸುತ್ತಾರೆ. ಅಲ್ಲದೇ ಕೆಲವು ಪೆಟ್ಟಿ ಅಂಗಡಿಗಳಿದ್ದು, ಕಿರಿದಾದ ಹಾಗೂ ಹಾಳಾದ ರಸ್ತೆಯಲ್ಲಿ ಶವ ಸಾಗಿಸುವ ಸಂದರ್ಭದಲ್ಲಿ ಪರದಾಟ ನಡೆಸಬೇಕಾಗಿದೆ.

ಯುಜಿಡಿ ಕಾಮಗಾರಿ ಯೋಜನೆಯಡಿ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದ್ದು, ಸಿಡಿಹಬ್ಬದೊಳಗೆ ಕೆಲಸ ಆರಂಭವಾಗಲಿದೆ. ಕೆಲ ವಾರ್ಡ್‌ಗಳಲ್ಲಿ ಇನ್ನೂ ರಸ್ತೆ ಮತ್ತು ಒಳಚರಂಡಿ ನಿರ್ಮಾಣವಾಗಿಲ್ಲ. ಈ ಬಗ್ಗೆ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಶಾಸಕರ ಗಮನಕ್ಕೆ ತಂದಿದ್ದು, ಸರ್ಕಾರದಿಂದ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು ಹೇಳಿದರು.

ರಸ್ತೆಯಲ್ಲಿ ಗುಂಡಿ, ಚರಂಡಿ ನೀರು

ಹೌಸಿಂಗ್ ಬೋರ್ಡ್, ಪೇಟೆ ಬೀದಿಯ ಅಡ್ಡರಸ್ತೆಗಳು, ಈದ್ಗಾ ಮೊಹಲ್ಲಾ, ವಡ್ಡರಕಾಲೊನಿ, ಮಂಚನಹಳ್ಳಿ ರಸ್ತೆ, ಮುಸ್ಲಿಂ ಹಾಗೂ ಮಸೀದಿ ರಸ್ತೆಗಳು ಗುಂಡಿ ಬಿದ್ದಿದ್ದು ವಾಹನಗಳು ಓಡಾಡಲು ಹರಸಾಹಸ ಪಡುವಂತಾಗಿದೆ. ಕುಂಬಾರ ಬೀದಿಯ ರಸ್ತೆಗಳು ಸೇರಿ ಜಿ.ಎಂ.ಸ್ಟ್ರೀಟ್ಸ್‌ ಮತ್ತು ಮಾರೇಹಳ್ಳಿ ಹಾಗೂ ಉಗ್ರಾಪುರದ ದೊಡ್ಡಿ ವಾರ್ಡಿನ ರಸ್ತೆಗಳು ಗುಂಡಿಬಿದ್ದಿದ್ದು, ಮಳೆಗಾಲಲ್ಲಿ ವಾಹನ ಸಂಚಾರ ಸಾಹಸವೇ ಆಗಿದೆ.

ಮೈಸೂರು ರಸ್ತೆ ಮಧ್ಯದಲ್ಲಿ ಚರಂಡಿ ಮ್ಯಾನ್ ಹೋಲ್‌ಗಳು ರಸ್ತೆಗಿಂತ ಎತ್ತರವಿದ್ದು, ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹಲವು ರಸ್ತೆಗಳಲ್ಲಿ ಒಳಚರಂಡಿ ನೀರು ಮ್ಯಾನ್‌ಹೋಲ್‌ ಮೂಲಕ ರಸ್ತೆಯಲ್ಲಿಯೇ ಹರಿಯುತ್ತಿದೆ. ಎನ್ಇಎಸ್ ಬಡಾವಣೆಯಲ್ಲಿ ಸರಿಯಾದ ಚರಂಡಿಗಳು ನಿರ್ಮಾಣವಾಗದ ಕಾರಣ ಕಲುಷಿತ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. 24X7 ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಬಹುತೇಕ ವಾರ್ಡ್‌ಗಳಲ್ಲಿ ದಿನಕ್ಕೆ ಒಂದು ಗಂಟೆಯೂ ನೀರು ಬರುತ್ತಿಲ್ಲ ಎಂದು ಜನರು ಆರೋಪಿಸುತ್ತಾರೆ.

ಅನುದಾನಕ್ಕಾಗಿ ಮನವಿ: ಶಾಸಕ

‘ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿದ್ದರು. ಆ ಹಣದಲ್ಲಿ ರಸ್ತೆಗಳು ಹಾಗೂ ಒಳಚರಂಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಕೊರೊನಾ ಕಾರಣದಿಂದ ಒಂದು ವರ್ಷದಿಂದ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಸದ್ಯದಲ್ಲಿಯೇ ಪುರಸಭೆ ಸದಸ್ಯರೊಂದಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.