ADVERTISEMENT

ಮಳವಳ್ಳಿ: ಮದ್ಯವರ್ಜನ ಕೇಂದ್ರದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:49 IST
Last Updated 9 ಸೆಪ್ಟೆಂಬರ್ 2024, 15:49 IST
ಸತೀಶ್
ಸತೀಶ್   

ಮಳವಳ್ಳಿ: ಕುಡಿತದ ಚಟ ಬಿಡಿಸುವ ಮದ್ಯವರ್ಜನ ಕೇಂದ್ರದಲ್ಲಿದ್ದ ತಾಲ್ಲೂಕಿನ ತಳಗವಾದಿ ಗ್ರಾಮದ ಲೇ.ನಾಗರಾಜು ಅವರ ಪುತ್ರ ಸತೀಶ್(40) ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಪಟ್ಟಣದ ವಡ್ಡರಕಾಲೋನಿಯ ಅಕ್ಷಯ ಅನಿಕೇತನ ಟ್ರಸ್ಟ್ ಸಂಸ್ಥೆಯ ಮದ್ಯವರ್ಜನ ಕೇಂದ್ರಕ್ಕೆ ಭಾನುವಾರ ಬೆಳಿಗ್ಗೆ ಸತೀಶ್ ಅವರನ್ನು ಕುಟುಂಬಸ್ಥರು ದಾಖಲಿಸಿದ್ದರು. ಸಂಜೆ ವೇಳೆಗೆ ಕರೆ ಮಾಡಿದ್ದ ಕೇಂದ್ರದ ಸಿಬ್ಬಂದಿ ಸತೀಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಹೀಗಾಗಿ ಶವವನ್ನು ಭಾನುವಾರ ರಾತ್ರಿ ತಳಗವಾದಿ ಗ್ರಾಮಕ್ಕೆ ತರಲಾಗಿತ್ತು. ಸೋಮವಾರ ಬೆಳಿಗ್ಗೆ ಶವದ ಬಟ್ಟೆ ಬದಲಾಯಿಸುವ ವೇಳೆ ಮೈಮೇಲೆ ಸಾಕಷ್ಟು ಗಾಯದ ಗುರುತು ಕಂಡ ಕುಟಂಬಸ್ಥರು ಸಾವಿನ ಅನುಮಾನ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಎಂ.ರವಿಕುಮಾರ್ ಮಾಹಿತಿ ಪಡೆದುಕೊಂಡಿದ್ದು,  ಮಂಡ್ಯದ ಮಿಮ್ಸ್ ನಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು.

ADVERTISEMENT

ಮೃತ ವ್ಯಕ್ತಿಯ ದೊಡ್ಡಪ್ಪ ಚಿಕ್ಕಹನುಮಯ್ಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.