
ಶ್ರೀರಂಗಪಟ್ಟಣ: ‘ಕೇರಳ ಸರ್ಕಾರ ಅಂಗೀಕರಿಸಿರುವ ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಕುವೆಂಪು ವೃತ್ತದ ಬಳಿ ಪ್ರತಿಭಟನೆ ನಡೆಸಿ ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಕೇರಳದ ಕಾಸರಗೋಡಿನಲ್ಲಿ 7 ಲಕ್ಷಕ್ಕೂ ಹೆಚ್ಚು ಕನ್ನಡಿಗರು ವಾಸಿಸುತ್ತಿದ್ದಾರೆ. ಅಲ್ಲಿ 200ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಅಲ್ಲಿನ ಸರ್ಕಾರದ ಉದ್ದೇಶಿತ ಮಸೂದೆಗೆ ಅನುಮೋದನೆ ನೀಡಿದರೆ ಕಾಸರಗೋಡು ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿದಂತಾಗುತ್ತದೆ. ಹಾಗಾಗಿ ಮಸೂದೆಗೆ ಅನುಮೋದನೆ ನೀಡಿದರೆ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳ ಕುರಿತು ಕರ್ನಾಟಕ ಸರ್ಕಾರವು ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಡಬೇಕು. ಅನುಮೋದನೆ ನೀಡದಂತೆ ನೋಡಿಕೊಳ್ಳಬೇಕು’ ಎಂದು ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿ.ಸ್ವಾಮಿಗೌಡ ಒತ್ತಾಯಿಸಿದರು.
ಮುಖಂಡರಾದ ಕೆ.ಬಿ.ಬಸವರಾಜು, ಪುರುಷೋತ್ತಮ, ಜಯಶಂಕರ್, ರವಿಕುಮಾರಸ್ವಾಮಿ, ದಿನೇಶ್, ಮಂಜುನಾಥ್, ಸಿದ್ದಲಿಂಗು, ಕೆ.ಟಿ. ರಂಗಯ್ಯ, ಉಮಾಶಂಕರ್, ಕೆಆರ್‌ಎಸ್ ಚಂದ್ರು, ಸೀತಾರಾಮು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.