ADVERTISEMENT

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಅಗತ್ಯ: ಕೆ.ಆರ್. ನಂದಿನಿ

ಸಿರಿಧಾನ್ಯಗಳ ಉತ್ಪನ್ನ ಮಾರಾಟಕ್ಕೆ ‘ಸಿರಿ ಸಮೃದ್ಧಿ’ ಬ್ರ್ಯಾಂಡಿಂಗ್‌: ಸಿಇಒ ಕೆ.ಆರ್‌.ನಂದಿನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:13 IST
Last Updated 16 ಅಕ್ಟೋಬರ್ 2025, 4:13 IST
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ‘ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ’ದ ಅಂಗವಾಗಿ ಸ್ವಸಹಾಯ ಸಂಘದ ಗುಂಪಿನ ಮಹಿಳಾ ಸದಸ್ಯರಿಗೆ ಬುಧವಾರ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರವನ್ನು ಸಿಇಒ ಕೆ.ಆರ್‌.ನಂದಿನಿ ಉದ್ಘಾಟಿಸಿದರು 
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ‘ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ’ದ ಅಂಗವಾಗಿ ಸ್ವಸಹಾಯ ಸಂಘದ ಗುಂಪಿನ ಮಹಿಳಾ ಸದಸ್ಯರಿಗೆ ಬುಧವಾರ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರವನ್ನು ಸಿಇಒ ಕೆ.ಆರ್‌.ನಂದಿನಿ ಉದ್ಘಾಟಿಸಿದರು    

ಮಂಡ್ಯ: ‘ಕೃಷಿಯನ್ನು ಕೇವಲ ಕೆಲಸವಾಗಿ ಮಾಡದೆ ಉದ್ದಿಮೆಯಾಗಿ ಮೌಲ್ಯವರ್ಧನೆ ಮಾಡಿದಾಗ ಮಾತ್ರ ಗ್ರಾಮೀಣ ಭಾಗದ ರೈತ ಮಹಿಳೆಯರ ಆರ್ಥಿಕ ಪ್ರಗತಿ ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಹೇಳಿದರು.

ಆಹಾರ ಸಂಸ್ಕರಣೆ ಸಚಿವಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ‘ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ’ದ ಅಂಗವಾಗಿ ಸ್ವಸಹಾಯ ಸಂಘದ ಗುಂಪಿನ ಮಹಿಳಾ ಸದಸ್ಯರಿಗೆ ಬುಧವಾರ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರೈತ ಮಹಿಳೆಯರು ಬೆಳೆಯುವ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಬೆಳೆಯನ್ನು ಮೌಲ್ಯವರ್ಧನೆಗೊಳಿಸಿ, ಪ್ಯಾಕಿಂಗ್ ಹಾಗೂ ಬ್ರ್ಯಾಂಡಿಂಗ್‌ ಮಾಡಿ ಮಾರಾಟ ಮಾಡಿದರೆ ಆದಾಯವನ್ನು ಹೆಚ್ಚಿಸಬಹುದು. ಹಾಗಾಗಿ ಎನ್.ಆರ್.ಎಮ್.ಎಲ್ ಮತ್ತು ಕೃಷಿ ಇಲಾಖೆ ಸೇರಿ ಸಿರಿಧಾನ್ಯದ ಉತ್ಪನ್ನ ಮಾರಾಟ ಮಾಡಲು ‘ಸಿರಿ ಸಮೃದ್ಧಿ’ ಎಂದು ಬ್ರ್ಯಾಂಡಿಂಗ್‌ ಮಾಡಲಾಗಿದೆ. ಇದರಿಂದ ರೈತರಿಗೂ ಆದಾಯ ವೃದ್ಧಿಸುತ್ತದೆ ಜೊತೆಗೆ ಗ್ರಾಹಕರ ಆರೋಗ್ಯವೂ ಸಮೃದ್ಧವಾಗಿರುತ್ತದೆ ಎಂದು ಹೇಳಿದರು.

ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಾಂತ್ರೀಕೃತ ಭತ್ತ ನಾಟಿ ಮಾಡುವುದನ್ನು ಪ್ರಾರಂಭಿಸಲಾಯಿತು. ಮಹಿಳೆಯರು ನನ್ನಿಂದ ಆಗದು ಎಂಬ ಭಾವನೆ ತೊರೆದು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬೆಳೆಸಿಕೊಳ್ಳಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಕೃಷಿ ಉದ್ದಿಮೆಯನ್ನು ವೃದ್ಧಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. 

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಬಾಬಾಸಾಬ್ ಅವರು ಮಾತನಾಡಿ ಮೀನುಗಾರಿಕೆ ಇಲಾಖೆಯಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ. ಮಹಿಳಾ ಸಹಕಾರ ಸಂಘಗಳಿಗೆ ಮೀನುಗಾರಿಕೆ ಮಾಡಲು ಕಡಿಮೆ ದರದಲ್ಲಿ ಕೆರೆಗಳನ್ನು ಗುತ್ತಿಗೆ ನೀಡಲಾಗುವುದು. ಈಗಾಗಲೇ ಅನೇಕ ಸ್ವಸಹಾಯ ಗುಂಪುಗಳು ಕೆರೆಗಳನ್ನು ಗುತ್ತಿಗೆ ಪಡೆದುಕೊಂಡು ಆದಾಯ ಗಳಿಸುತ್ತಿವೆ. ಜಿಲ್ಲೆಯಲ್ಲಿ 11 ಮತ್ಸ್ಯ ವಾಹಿನಿ ತ್ರಿಚಕ್ರವಾಹನಗಳನ್ನು ನೀಡಲಾಗಿದೆ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗನಂದ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಕೃಷಿ ವಿಜ್ಞಾನಿ ಶ್ರೀದೇವಿ, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷ ಕಾರಸವಾಡಿ ಮಹದೇವ, ಮಂಡ್ಯ ಉಪವಿಭಾಗದ ಕೃಷಿ ಉಪನಿರ್ದೇಶಕ ಮುನೇಗೌಡ, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರ ಗುರು, ರಾಕೇಶ್ ಹಾಜರಿದ್ದರು. 

ತೋಟಗಾರಿಕೆ ಉತ್ಪನ್ನಗಳಲ್ಲಿ ಜೇನು ಸಾಕಾಣಿಕೆಯಿಂದ ಆದಾಯ ಹೆಚ್ಚಿಸಬಹುದು. ಜೇನು ತುಪ್ಪಕ್ಕೆ ಉತ್ತಮ ಮಾರುಕಟ್ಟೆ ಬ್ರ್ಯಾಂಡಿಂಗ್‌ ಕಲ್ಪಿಸಲು ಇಲಾಖೆ ನೆರವು ನೀಡುತ್ತದೆ
ರೂಪಶ್ರೀ ಉಪನಿರ್ದೇಶಕಿ ತೋಟಗಾರಿಕೆ ಇಲಾಖೆ
ನಾಟಿ ಕೋಳಿ ಸಾಕಾಣಿಕೆಯಿಂದ ಮೊಟ್ಟೆಯನ್ನು ಬ್ರ್ಯಾಂಡಿಂಗ್‌ ಮಾಡಿ ಮಾರಾಟ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಸಕ್ತ ಮಹಿಳೆಯರು ತರಬೇತಿ ಪಡೆಯಬಹುದು
ಶಿವಲಿಂಗಯ್ಯ ಉಪನಿರ್ದೇಶಕ ಪಶುಸಂಗೋಪನಾ ಇಲಾಖೆ

‘ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ’

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಮಾತನಾಡಿ ‘ಪ್ರತಿ ವರ್ಷ ಮುಂಗಾರಿನಲ್ಲಿ ಜಿಲ್ಲೆಯ ಪ್ರಮುಖ ಬೆಳಗಳಾದ ಕಬ್ಬು ರಾಗಿ ಭತ್ತದಿಂದ ಸುಮಾರು ₹2 ಸಾವಿರ ಕೋಟಿಯಷ್ಟು ಆರ್ಥಿಕ ಚಟುವಟಿಕೆ ಉಂಟಾಗುತ್ತದೆ. ಸದರಿ ಪ್ರಮುಖ ಬೆಳೆಗಳನ್ನು ಸಂಸ್ಕರಣೆಗಾರರು ಹಾಗೂ ಮಧ್ಯವರ್ತಿಗಳು ಖರೀದಿಸಿ ಮೌಲ್ಯವರ್ಧನೆ ಮಾಡಿ ಸರಿಸುಮಾರು ₹6 ಸಾವಿರ ಕೋಟಿಯಷ್ಟು ಆದಾಯ ಗಳಿಸುತ್ತಾರೆ. ರೈತ ಮಹಿಳೆಯರು ತಾವು ಉತ್ಪಾದಿಸಿದ ವಸ್ತುಗಳನ್ನು ಮೌಲ್ಯವರ್ಧನೆಗೆ ಒಳಪಡಿಸಿದರೆ ₹3 ರಿಂದ ₹4 ಸಾವಿರ ಕೋಟಿಯಷ್ಟು ಹಣವನ್ನು ಗಳಿಸಬಹುದಾಗಿದೆ ಎಂದರು. ಪಿ.ಎಂ.ಎಫ್.ಎಂ.ಇ ಯೋಜನೆಯಡಿ 163 ಸಂಜೀವಿನಿ ಒಕ್ಕೂಟ ಸದಸ್ಯರಿಗೆ ತಲಾ ₹40 ಸಾವಿರದಂತೆ ಆರ್ಥಿಕ ನೆರವು ನೀಡಲಾಗಿದೆ. ಜಿಲ್ಲೆಯ ಮದ್ದೂರು ವಡೆ ಚಿಕ್ಕಿ ಬೆಲ್ಲವನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಆದಾಯ ಹೆಚ್ಚಿಸಬಹುದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.