ಮಂಡ್ಯ: ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರಸ್ವಾಮಿ ಅಗ್ನಿಕುಂಡ ಮಹೋತ್ಸವ ಅಂಗವಾಗಿ ಕೊಂಡೋತ್ಸವಕ್ಕೆ ಭಕ್ತರ ಜೈಕಾರದೊಂದಿಗೆ ಮಂಗಳವಾರ ಸಂಜೆ ಅಗ್ನಿಸ್ಪರ್ಶ ಮಾಡಲಾಯಿತು.
ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತರು ಕೊಂಡ ಪ್ರದಕ್ಷಿಣೆ ಮಾಡಿದರು. ಮಹಿಳೆಯರು ಹೆಜ್ಜೆ ನಮಸ್ಕಾರ ಹಾಕಿದರು. ಬಾಯಿಬೀಗ ಹಾಕಿಸಿಕೊಂಡು ಸಾವಿರಾರು ಜನ ಹರಕೆ ತೀರಿಸಿದರು. ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕೆ ದೂರ ದೂರಿನಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.
ಕೀಲಾರದ ಕಂಚಿನ ಮಾರಮ್ಮ ಹಾಗೂ ಸೋಮೇಶ್ವರ ದೇವಸ್ಥಾನದಿಂದ ಕೀಲಾರ ಗ್ರಾಮಸ್ಥರು ನಾಲ್ಕು ಜೋಡೆತ್ತುಗಳೊಂದಿಗೆ ಮೆರವಣಿಗೆ ಮೂಲಕ ಆಲಕೆರೆ ಗ್ರಾಮದ ಗಡಿಗೆ ಬಂದರು. ಆಲಕೆರೆ ಗ್ರಾಮಸ್ಥರು ಎಲ್ಲರನ್ನೂ ಬರಮಾಡಿಕೊಂಡರು. ತಮಟೆ ಸದ್ದಿನ ಜತೆ ಮೆರವಣಿಗೆ ಮೂಲಕ ಜೋಡೆತ್ತುಗಳು ಹಾಗೂ ಗ್ರಾಮಸ್ಥರು ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದು ವಿಶೇಷ ಎನಿಸಿತು.
ಆಲಕೆರೆ ಗ್ರಾಮದ ಬಂಡಿಗಳನ್ನು ಕಟ್ಟಿ ಗುಡ್ಡಪ್ಪರನ್ನು ಹೊತ್ತ ಬಂಡಿಗಳು ಕೊಂಡದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದವು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ 5.05ಕ್ಜೆ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.
ರಾತ್ರಿಯಿಡೀ ರಂಗ ಕುಣಿತ ನಡೆಯಲಿದೆ. ಮಧ್ಯರಾತ್ರಿ ದೇವರಿಗೆ ಹೂ ಹೊಂಬಾಳೆ ನಡೆಸಿ ಬುಧವಾರ ಬೆಳಗಿನ ಜಾವ ದೇವರ ಗುಡ್ಡರಾದ ರೇಣುಕಾಸ್ವಾಮಿ ಹಾಗೂ ಕಾಂತೇಶ್ ಕುಮಾರ್ ಅವರು ಕೊಂಡ ಹಾಯುವರು.
ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಕುಮಾರ, ಜಿ.ಪಂ.ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕೀಲಾರ ಮತ್ತು ಆಲಕೆರೆ ಗ್ರಾಮದ ಮುಖಂಡರು, ಯಜಮಾನರು ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.