ಮಂಡ್ಯ: ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಸಾರಥ್ಯದ ‘ಟೆಂಟ್ ಸಿನಿಮಾ’ ಶಾಲೆ ವತಿಯಿಂದ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗಾಗಿ ‘ಪುಸ್ತಕ ದೇಣಿಗೆ ಅಭಿಯಾನ’ವನ್ನು ಆರಂಭಿಸಲಾಗಿದೆ.
ಸಾರ್ವಜನಿಕರು ಉದಾರ ಮನಸ್ಸಿನಿಂದ ತಮ್ಮಲ್ಲಿರುವ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರೆ, ಅವುಗಳನ್ನು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತ್ತದೆ. ಈ ಅಭಿಯಾನವು ಇದೇ ಜೂನ್ 30ರವರೆಗೆ ನಡೆಯಲಿದೆ ಎಂದು ಅಭಿಯಾನದ ಸಂಚಾಲಕರು ತಿಳಿಸಿದ್ದಾರೆ.
‘ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಎ.ನಾಗತಿಹಳ್ಳಿಯಲ್ಲಿ ನನ್ನ ತಾಯಿ-ತಂದೆಯವರ ನೆನಪಿಗಾಗಿ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ನಿರ್ಮಿಸಿರುವ ಗ್ರಂಥಾಲಯಕ್ಕೆ ಈಗ 22 ವರ್ಷ. ಈ ಗ್ರಂಥಾಲಯಕ್ಕೆ ಅನೇಕರು ಪುಸ್ತಕಗಳನ್ನು ಈಗಾಗಲೇ ದಾನ ಮಾಡಿದ್ದಾರೆ. ಈ ಚಟುವಟಿಕೆಯ ಮುಂದುವರಿದ ಭಾಗವೇ ಈ ಅಭಿಯಾನ. ಪುಸ್ತಕ ಚಳವಳಿಯು ನಾಗತಿಹಳ್ಳಿಗೆ ಸೀಮಿತವಾಗಬಾರದೆಂದು ಬೆಂಗಳೂರಿಗೂ ವಿಸ್ತರಿಸಿದ್ದೇವೆ. ಕೆಲವರು ಕಾಳಜಿಯಿಂದ ನಮ್ಮ ಟೆಂಟ್ ಸಿನಿಮಾ ಶಾಲೆಗೆ ಪುಸ್ತಕಗಳನ್ನು ತಂದುಕೊಡುತ್ತಿದ್ದಾರೆ’ ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದರು.
‘ಕೆಲವು ಕಡೆ ಹಿರಿಯ ನಾಗರಿಕರ ಬಳಿ ಪುಸ್ತಕಗಳ ಸಂಗ್ರಹ ಹೆಚ್ಚಿದ್ದು, ಅವರು ಕಳುಹಿಸಲು ಅಶಕ್ತರಾಗಿದ್ದರೆ ನಾವೇ ಹೋಗಿ ಸಂಗ್ರಹಿಸುತ್ತೇವೆ. ಇವು ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಪುಸ್ತಕಗಳು. ಮೊದಲಿಗೆ 100 ಪುಸ್ತಕಗಳು ಸಂಗ್ರಹವಾದುವು. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಈ ವರ್ಷ 5 ಸಾವಿರ ದಾಟುವ ನಿರೀಕ್ಷೆ ಇದೆ’ ಎಂದು ತಿಳಿಸಿದ್ದಾರೆ.
‘ಬೆಂಗಳೂರಿನ ಕೊಳೆಗೇರಿಗಳಲ್ಲಿರುವ ಕೂಲಿಯವರ, ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳನ್ನು ಆರಿಸಿಕೊಂಡು ಹಂಚುತ್ತೇವೆ. ಈ ವಾರ್ಷಿಕ ಅಭಿಯಾನ ಮುಗಿದ ಮೇಲೆ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತೇವೆ. ಇದು ಒಂದು ಪುಟ್ಟ ಸೇವೆ’ ಎನ್ನುತ್ತಾರೆ ‘ಟೆಂಟ್ ಸಿನಿಮಾ’ ಶಾಲೆಯ ಮುಖ್ಯಸ್ಥೆ ಸಿ.ಎಸ್. ಶೋಭಾ.
ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ಟೆಂಟ್ ಸಿನಿಮಾ, 184, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು–70. ಮೊ:9900555255
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.