ADVERTISEMENT

ಗಜೇಂದ್ರ ಮೋಕ್ಷ ಕೊಳಕ್ಕೆ ಹೊಸ ರೂಪ

ವಿವಿಧ ಸಂಘಟನೆಗಳ ಒತ್ತಾಯಕ್ಕೆ ಸಿಕ್ಕ ಫಲ, ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:13 IST
Last Updated 7 ಆಗಸ್ಟ್ 2020, 14:13 IST
ಮಂಡ್ಯದ ಗಜೇಂದ್ರ ಮೋಕ್ಷ ಕೊಳ ಸುಂದರ ರೂಪ ಪಡೆದಿರುವುದು
ಮಂಡ್ಯದ ಗಜೇಂದ್ರ ಮೋಕ್ಷ ಕೊಳ ಸುಂದರ ರೂಪ ಪಡೆದಿರುವುದು   

ಮಂಡ್ಯ: ನಗರದ ಪುರಾಣ ಪ್ರಸಿದ್ಧ ಗಜೇಂದ್ರ ಮೋಕ್ಷ ಕೊಳ್ಳ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರ ಆಸಕ್ತಿಯಿಂದ ಕೊಳ ವಿಶೇಷ ರೂಪ ಪಡೆಯುತ್ತಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಳದ ಸುತ್ತಲೂ ವಾಕಿಂಗ್‌ ಪಾತ್‌ ನಿರ್ಮಾಣಗೊಳ್ಳುತ್ತಿದ್ದು ವಿಹಾರ ಮಾಡುವವರಿಗೆ ಹೊಸ ಅನುಭವ ನೀಡಲಿದೆ. ಸುತ್ತಲೂ ಸಿಸಿ ನೆಡಲಾಗುತ್ತಿದ್ದು ಹಸಿರು ಸ್ಪರ್ಶ ನೀಡಲಾಗುತ್ತಿದೆ. ಕಲ್ಲು ಬೆಂಚ್‌ಗಳು ಬರಲಿದ್ದು ಕಾಲ ಕಳೆಯುವವರಿಗೆ ಉತ್ತಮ ತಾಣವಾಗಲಿದೆ.

ಕೊಳದ ಆವರಣದಲ್ಲಿರುವ ನಾಗರಕಟ್ಟೆ ಕೂಡ ಐತಿಹಾಸಿಕ ಮಹತ್ವ ಹೊಂದಿದೆ. ಹಿಂದೆ ಲಕ್ಷ್ಮಿ ಜನಾರ್ಧನ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಈ ಕೊಳದಿಂದ ಆರಂಭಗೊಳ್ಳುತ್ತಿದ್ದವು. ಈಗಲೂ ಕಾಳಿಕಾಂಬ ಕಲ್ಯಾಣಮಂಟಪದಲ್ಲಿ ವಿವಾಹ ಮಾಡುವವರು ನಾಗರಕಟ್ಟೆಗೆ ಪೂಜೆ ಸಲ್ಲಿಸಿ, ಗಂಡು–ಹೆಣ್ಣಿನ ಶಾಸ್ತ್ರ ಮಾಡುತ್ತಾರೆ. ಈಗ ನಾಗರಕಟ್ಟೆ ಸುತ್ತಲೂ ಸ್ವಚ್ಛಗೊಳಿಸಿ ವಿಶೇಷ ರೂಪ ನೀಡಲಾಗುತ್ತಿದೆ.

ADVERTISEMENT

ಕೊಳದ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು ₹ 9.30 ಲಕ್ಷ ಹಣ ಬಿಡುಗಡೆ ಮಾಡಿದ್ದು ಕಾಮಗಾರಿ ಭರದಿಂದ ನಡೆಯುತ್ತಿದೆ. ಇನ್ನು 15 ದಿನದಲ್ಲಿ ಜನರು ಕೊಳದ ವಿಶೇಷ ರೂಪವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಗಜೇಂದ್ರ ಮೋಕ್ಷ ಕೊಳ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಪಾಳು ಬಿದ್ದಿತ್ತು. 4 ವರ್ಷಗಳ ಹಿಂದೆಯೇ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಹಾಗೂ ಇತರ ಸಂಘಟನೆಗಳು ಕೊಳದ ಅಭಿವೃದ್ಧಿಗೆ ಒತ್ತಾಯಿಸುತ್ತಲೇ ಬಂದಿದ್ದವು. ಅಜಯ್‌ನಾಗಭೂಷಣ್‌ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಅಭಿವೃದ್ಧಿ ಕಾರ್ಯಕ್ಕೆ ಮನಸ್ಸು ಮಾಡಿದ್ದರು. ಆದರೆ ಅವರು ವರ್ಗಾವಣೆಯಾದ ನಂತರ ಕಾಮಗಾರಿ ಮತ್ತೆ ಹೋಗಿತ್ತು.

ಎಂ.ವಿ.ವೆಂಕಟೇಶ್‌ ಅವರು ಜಿಲ್ಲಾಧಿಕಾರಿಯಾದ ನಂತರ ವಿವಿಧ ಸಂಘಟನೆಗಳ ಮುಖಂಡರು ಕೊಳದ ಅಭಿವೃದ್ಧಿ ವಿಚಾರ ಪ್ರಸ್ತಾಪ ಮಾಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಡಾ.ಎಂ.ವಿ.ವೆಂಕಟೇಶ್‌ ಅವರು ಹಣ ಬಿಡುಗಡೆ ಮಾಡಿದ್ದರು. ಕಳೆದ ವರ್ಷದ ಗಾಂಧಿ ಜಯಂತಿಯ ದಿನದಂದು ಅವರೇ ಕೊಳದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು.

‘ಮಂಡ್ಯದ ಸುಂದರ ಪರಿಸರದ ನಡುವೆ ಗಜೇಂದರ ಮೋಕ್ಷ ಕೊಳವಿದೆ. ಅದನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ಎಲ್ಲಾ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಶಾಸಕ ಎಂ.ಶ್ರೀನಿವಾಸ್‌ ಹಾಗೂ ಜಿಲ್ಲಾಧಿಕಾರಿಗಳ ಆಸಕ್ತಿಯಿಂದ ಕೊಳ ಹೊಸ ರೂಪ ಪಡೆಯುತ್ತಿದೆ. ಹಲವು ವರ್ಷಗಳ ನಮ್ಮ ಒತ್ತಾಯಕ್ಕೆ ಫಲ ಸಿಕ್ಕಿದೆ’ ಎಂದು ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಪಿ.ಮಹೇಂದ್ರಬಾಬು ಹೇಳಿದರು.

***

ಶಾಸಕರ ನಿಧಿಯಿಂದಲೂ ಹಣ

‘ಗಜೇಂದ್ರ ಮೋಕ್ಷ ಕೊಳವನ್ನು ಪಾರಂಪರಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ಶಾಸಕರ ನಿಧಿಯಿಂದಲೂ ಹಣ ಬಿಡುಗಡೆ ಮಾಡಲಾಗುವುದು. ಕೊಳದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು’ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.