ADVERTISEMENT

‘ಕಾವೇರಿ ಚಳವಳಿ’ ಖ್ಯಾತಿಯ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪುನರ್‌ ರಚನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 12:41 IST
Last Updated 20 ಆಗಸ್ಟ್ 2025, 12:41 IST
   

ಮಂಡ್ಯ: ಕಾವೇರಿ ನದಿ ನೀರಿಗಾಗಿ ನಡೆಸಿದ ಚಳವಳಿಯಿಂದ ಖ್ಯಾತಿ ಪಡೆದಿರುವ ‘ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ’ಯನ್ನು ಪುನರ್‌ ರಚನೆ ಮಾಡಿ, ಪದಾಧಿಕಾರಿಗಳನ್ನು ಅಧಿಕೃತವಾಗಿ ಬುಧವಾರ ಘೋಷಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ನೂತನ ಸಮಿತಿಯ ಅಧ್ಯಕ್ಷ ಜಿ.ಬಿ.ಶಿವಕುಮಾರ್‌ ಮಾತನಾಡಿ, ‘1991–92ನೇ ಸಾಲಿನಲ್ಲಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಜಿ.ಮಾದೇಗೌಡ ನೇತೃತ್ವದಲ್ಲಿ ಕಾವೇರಿ ನದಿ ನೀರಿನ ವಿಚಾರವಾಗಿ ಪಕ್ಷಾತೀತವಾಗಿ ಈ ಸಮಿತಿ ಸ್ಥಾಪನೆಯಾಗಿತ್ತು. ಮಂಡ್ಯದಲ್ಲಿ ರಾಷ್ಟ್ರಮಟ್ಟದ ಸಭೆ ನಡೆಸಿ, ಈ ಸಮಿತಿಗೆ ಮಾದೇಗೌಡರು ಘನತೆ ತಂದುಕೊಟ್ಟಿದ್ದರು. ಈಗ ಜಿ.ಮಾದೇಗೌಡರು ಮತ್ತು ಸಮಿತಿಯ ಕೆಲವು ಸದಸ್ಯರು ನಿಧನರಾದ ಕಾರಣ ಸಮಿತಿಯನ್ನು ಮತ್ತೆ ಗಟ್ಟಿಗೊಳಿಸಿ, ಹೋರಾಟ ನಡೆಸಲು ಪುನರ್‌ ರಚನೆ ಮಾಡಿ, ಪದಾಧಿಕಾರಿಗಳನ್ನು ನೇಮಿಸಿದ್ದೇವೆ’ ಎಂದರು.

ಹಿರಿಯ ಉಪಾಧ್ಯಕ್ಷರಾಗಿ ಎಂ.ಬಿ.ಬೋರೇಗೌಡ, ಕೆ.ಬೋರಯ್ಯ, ಬಿ.ಶಿವಲಿಂಗಯ್ಯ, ಉಪಾಧ್ಯಕ್ಷರಾಗಿ ಎಸ್‌.ಕೆಂಪೇಗೌಡ, ಕೆ.ಎನ್‌.ಗುರುಪ್ರಸಾದ್‌, ಎಚ್‌.ಚಂದ್ರಶೇಖರ್‌, ಪ್ರಧಾನ ಕಾರ್ಯದರ್ಶಿಯಾಗಿ ಸುನಂದಾ ಜಯರಾಂ, ಸಂಘಟನಾ ಕಾರ್ಯದರ್ಶಿಯಾಗಿ ಎಚ್‌.ಸಿ. ಮಂಜುನಾಥ್‌, ಎಸ್‌.ನಾರಾಯಣ್‌, ಟಿ.ಎಸ್‌.ವೆಂಕಟೇಶ್‌, ಎಸ್‌.ಮಂಜೇಶ್‌ಗೌಡ, ಎಸ್‌.ಕೃಷ್ಣ, ಎಸ್‌.ಎಂ.ವೇಣುಗೋಪಾಲ್‌, ಎಂ.ಬಿ.ನಾಗಣ್ಣ, ಎಚ್‌.ಜಿ.ಪ್ರಭುಲಿಂಗು, ಎಂ.ವಿ.ಕೃಷ್ಣ, ಖಜಾಂಚಿಯಾಗಿ ಮುದ್ದೇಗೌಡ, ಸದಸ್ಯರಾಗಿ ಅಂಬುಜಮ್ಮ, ಎಂ.ಎನ್‌. ಮಹೇಶ್‌ ಕುಮಾರ್‌, ಸಿ.ಮಂಜುನಾಥ್‌, ಸಿ.ಬಿ.ಮಂಜುನಾಥ್‌, ಎಲ್‌. ಸುರೇಶ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕಾಯಂ ಸದಸ್ಯರಾಗಿ ಜಿಲ್ಲೆಯ ಹಾಲಿ ಮತ್ತು ಮಾಜಿ ಸಂಸತ್‌ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ಜಿಲ್ಲೆಯ ರಾಜಕೀಯ ಪಕ್ಷಗಳ ಹಾಲಿ ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲೆಯ ಪ್ರಗತಿಪರ ಹೋರಾಟ ಸಂಘಟನೆಗಳ ಅಧ್ಯಕ್ಷರು ಇರುತ್ತಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.