ADVERTISEMENT

ಮಂಡ್ಯ| ಸರ್ಕಾರಿ ಜಮೀನು ಅಕ್ರಮ ಮಂಜೂರಾತಿ: ಇಬ್ಬರು ಶಿರಸ್ತೇದಾರರ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:13 IST
Last Updated 17 ಜನವರಿ 2026, 16:13 IST
   

ಮಂಡ್ಯ: ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಕಂದಾಯ ಮೂಲ ದಾಖಲೆಗಳನ್ನು ಅಕ್ರಮವಾಗಿ ತಿದ್ದಿ ಮತ್ತು ಸೃಷ್ಟಿಸಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಇಬ್ಬರು ಶಿರಸ್ತೇದಾರರನ್ನು ಅಮಾನತುಗೊಳಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್‌ ಪಾಟೀಲ್‌ ಶನಿವಾರ ಆದೇಶ ಹೊರಡಿಸಿದ್ದಾರೆ. 

ಭೂ ಮಂಜೂರಾತಿ ವಿಭಾಗದ ಶಿರಸ್ತೇದಾರ ರವಿಶಂಕರ್‌ ಮತ್ತು ಆಡಳಿತ ಶಾಖೆಯ ಎಚ್‌.ಎಸ್‌. ಉಮೇಶ್‌ ಅಮಾನತುಗೊಂಡವರು. ಜೊತೆಗೆ ಕರ್ತವ್ಯದ ಹಕ್ಕಿನ ಸ್ಥಾನವನ್ನು ನಮೂದಿಸಿ, ರವಿಶಂಕರ್‌ ಅವರನ್ನು ಮಳವಳ್ಳಿ ತಾಲ್ಲೂಕಿನ ಆರ್‌.ಆರ್‌.ಟಿ. ಶಾಖೆಗೆ ಮತ್ತು ಉಮೇಶ್‌ ಅವರನ್ನು ಮದ್ದೂರು ತಾಲ್ಲೂಕಿನ ಚುನಾವಣಾ ಶಾಖೆಗೆ ವರ್ಗಾವಣೆ ಮಾಡಲಾಗಿದೆ. 

ಅಕ್ರಮವಾಗಿ ಸಾಗುವಳಿ ಚೀಟಿ ನೀಡುವ ಮೂಲಕ ಸರ್ಕಾರಿ ಭೂಮಿ ಮಂಜೂರು ಮಾಡಿರುವ ದೂರು ಕೇಳಿಬಂದ ಮೇರೆಗೆ ಲೋಕಾಯುಕ್ತ ಪೊಲೀಸರು ಬುಧವಾರ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ಇಬ್ಬರು ಶಿರಸ್ತೇದಾರರು ಸೇರಿದಂತೆ ಒಟ್ಟು ಐವರು ಸರ್ಕಾರಿ ನೌಕರರನ್ನು ಬುಧವಾರವೇ ಬಂಧಿಸಿದ್ದರು. ನಾಗಮಂಗಲ ಟೌನ್‌ ಪೊಲೀಸ್ ಠಾಣೆಯಲ್ಲಿ ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಐವರು ನೌಕರರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. 

ADVERTISEMENT

ಜಿಲ್ಲಾಧಿಕಾರಿ ಕುಮಾರ ಅವರು, ಎರಡು ದಿನಗಳ ಹಿಂದೆ ನಾಲ್ವರು ದ್ವಿತಿಯ ದರ್ಜೆ ಸಹಾಯಕರನ್ನು ಅಮಾನತುಗೊಳಿಸಿ ಆದೇಶಿಸಿದ್ದರು. ಇಬ್ಬರು ಶಿರಸ್ತೇದಾರರ ವಿರುದ್ಧ ಶಿಸ್ತುಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.