ADVERTISEMENT

ಮಂಡ್ಯ, ಹಾಸನ ಬಿಜೆಪಿಗೆ ಸಿಗುವ ಸಾಧ್ಯತೆ: ಪ‍್ರೀತಂಗೌಡ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ‍್ರೀತಂಗೌಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 14:16 IST
Last Updated 4 ಫೆಬ್ರುವರಿ 2024, 14:16 IST
ಪಾಂಡವಪುರ ತಾಲೂಕಿನ ಕೆನ್ನಾಳು ಗೇಟ್ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಪ್ರೀತಮ್‌ಗೌಡ, ಕೆ.ಸಿ.ನಾರಾಯಣಗೌಡ, ಡಾ.ಇಂದ್ರೇಶ್, ಸಿದ್ದರಾಮಯ್ಯ ಭಾಗವಹಿಸಿದ್ದರು
ಪಾಂಡವಪುರ ತಾಲೂಕಿನ ಕೆನ್ನಾಳು ಗೇಟ್ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಪ್ರೀತಮ್‌ಗೌಡ, ಕೆ.ಸಿ.ನಾರಾಯಣಗೌಡ, ಡಾ.ಇಂದ್ರೇಶ್, ಸಿದ್ದರಾಮಯ್ಯ ಭಾಗವಹಿಸಿದ್ದರು   

ಪಾಂಡವಪುರ: ‘ಪಕ್ಷವನ್ನು ವಿರೋಧಿಸುತ್ತಿದ್ದ ಜೆಡಿಎಸ್ ಈಗ ಎನ್‌ಡಿಎ ಕೂಟ ಸೇರಿ ಮೈತ್ರಿ ಮಾಡಿಕೊಂಡಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ಕೈ ಜೋಡಿಸಿದನ್ನು ಸ್ವಾಗತಿಸುತ್ತೇವೆ. ಆದರೂ, ಹಾಸನ, ಮಂಡ್ಯ ಎರಡು ಕ್ಷೇತ್ರಗಳು ಬಿಜೆಪಿಗೆ ಸಿಗಬಹುದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ‍್ರೀತಂಗೌಡ ತಿಳಿಸಿದರು.

ತಾಲೂಕಿನ ಕೆನ್ನಾಳು ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಗ್ರಾಮದಲ್ಲೂ ಪಕ್ಷ ಕಟ್ಟುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಒಪ್ಪಿಗೆ, ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು. ಮೈತ್ರಿಯಿಂದಾಗಿ ಕ್ಷೇತ್ರ ಬಿಟ್ಟುಕೊಡಬೇಕಾದರೆ ಕಾರ್ಯಕರ್ತರು ಎದೆಗುಂದಬಾರದು’ ಎಂದು ಧೈರ್ಯ ತುಂಬಿದರು.

ADVERTISEMENT

‘ಮಂಡ್ಯಕ್ಕೂ ಕುಟುಂಬ ರಾಜಕಾರಣ ವ್ಯಾಪಿಸಿದೆ. ಗೌಡರಿಗೆ ಹಾಸನದಂತೆ, ಮಂಡ್ಯದಲ್ಲೂ ನೆಂಟರು ಇರುತ್ತಾರೆ. ನಮ್ಮ ಸಂಕಲ್ಪ ಕುಟುಂಬ ರಾಜಕಾರಣದ ವಿರುದ್ಧ ಇರಬೇಕು. ರಾಜ್ಯದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೇ ಬೇಡ. ಅವರಾಯ್ತು, ಮಕ್ಕಳು ಆಯ್ತು, ಮೊಮಕ್ಕಳೂ ಆಯ್ತು ಈಗ ಮರಿ ಮಕ್ಕಳ ಸರದಿ’ ಎಂದು ಮೈತ್ರಿ ಪಕ್ಷದ ನಾಯಕರನ್ನು ಕುಟುಕಿದರು.

ಕಾಂಗ್ರೆಸ್‌ಗೆ ಸವಾಲು: ‘ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಯಾವ ಯೋಜನೆ ರೂಪಿಸಿ ಜಾರಿಗೆ ತಂದಿದೆ ಎಂಬುದನ್ನು ಆ ಪಕ್ಷದ ನಾಯಕರು ತಾಕತ್ತಿದ್ದರೆ ಬಹಿರಂಗ ಪಡಿಸಲಿ’ ಎಂದು ಹಿರಿಯ ಮುಖಂಡ ಎಸ್.ಎ.ರಾಮದಾಸ್ ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಕಾಂಗ್ರೆಸ್ಸಿಗರ ಸಾಧನೆ ಶೂನ್ಯ. ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಮುಂದಿನ ಐದು ವರ್ಷಗಳ ಅವಧಿಗೆ ಉಚಿತ ಅಕ್ಕಿ ಯೋಜನೆ ವಿಸ್ತರಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರ 302 ಯೋಜನೆಗಳನ್ನು ಜಾರಿಗೆ ತಂದಿದ್ದು, 109 ಯೋಜನೆಗಳು ವ್ಯಕ್ತಿಗತವಾಗಿ ತಲುಪಿದೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಪರವಾದ ಯೋಜೆನಗಳನ್ನು ರೂಪಿಸಿದೆ. ಬಿಜೆಪಿ ಪಕ್ಷ ಧ್ವಜ ಹಿಡಿದುಕೊಂಡು ಚುನಾವಣೆಗೆ ಹೋಗುತ್ತಿಲ್ಲ. ಧ್ವಜದ ಮೇಲೆ ರಾಜಕಾರಣ ಮಾಡಿದವರಿಗೆ ಮಂಡ್ಯ ಜಿಲ್ಲೆ ಜನತೆ ಚಳವಳಿ ಮೂಲಕ ಒಂದೇ ವಾರದಲ್ಲಿ ಉತ್ತರ ನೀಡಿದ್ದಾರೆ’ ಎಂದು ತಿರುಗೇಟು ನೀಡಿದರು.

ಕಾರ್ಯಕಾರಿಣಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಕೆ.ಸಿ.ನಾರಾಯಣಗೌಡ, ನಂಜುಂಡೇಗೌಡ, ಎಸ್.ಪಿ.ಸ್ವಾಮಿ, ಈ.ಸಿ.ನಿಂಗರಾಜು. ಟಿ.ಶ್ರೀಧರ್ ಭಾಗವಹಿಸಿದ್ದರು.

ಕಾರ್ಯಕಾರಿಣಿಯಲ್ಲಿ ಪಕ್ಷದ ಪದಾಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.