
ಮಂಡ್ಯ: ‘ಹಿಂದಿನ ಕಾಲಘಟ್ಟದಲ್ಲಿದ್ದ ಆರೋಗ್ಯ ಕಾಳಜಿ ಈಗ ಇಲ್ಲದಿರುವುದು ಸಾವು– ನೋವು ಹೆಚ್ಚಳವಾಗಲು ಕಾರಣ’ ಎಂದು ದಾವಣಗೆರೆ ನ್ಯಾಚುರೋಪತಿ ತಜ್ಞ ವೈದ್ಯ ಬಿ.ಆರ್.ಗಂಗಾಧರ ವರ್ಮ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಸ್ವಯಂ ಸ್ವಾಸ್ಥ್ಯನೇಚರ್ ಕ್ಯೂರ್ ಫೌಂಡೇಷನ್, ಎಂ.ಆರ್.ಎಂ.ಪ್ರಕಾಶನದ ಸಹಯೋಗದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ, ಕೃತಿ ಬಿಡುಗಡೆ ಹಾಗೂ ಆರೋಗ್ಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.
‘ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಹೆಚ್ಚುತ್ತಲೇ ಇದ್ದು, ಬೊಜ್ಜು ಜಾಸ್ತಿ ಇರುವುದೇ ಕಾರಣವಾಗಿದೆ. ನಮ್ಮ ಜೀವನ ಶೈಲಿಯಲ್ಲಿ ಆಹಾರ ಬದಲಾವಣೆಯಿಂದಾಗಿ ರೋಗಗಳು ಬರುತ್ತಿದ್ದು, ಸಾವು ಸಹ ಸಂಭವಿಸುತ್ತಿದೆ’ ಎಂದು ಆತಂಕಪಟ್ಟರು.
ನೈಸರ್ಗಿಕ ಕೃಷಿಯಿಂದ ಮಾತ್ರ ರೋಗಗಳನ್ನು ತಡೆಗಟ್ಟುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಗಾಳಿ, ನೀರು, ಆಹಾರ ಪ್ರಮುಖವಾಗಿದ್ದು, ಆಹಾರದಷ್ಟೇ ಪ್ರಾಮುಖ್ಯತೆಯನ್ನು ನೀರಿಗೆ ಕೊಟ್ಟರೆ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬಹುದು. ನೀರನ್ನು ಯಥೇಚ್ಛವಾಗಿ ಕುಡಿಯುವುದನ್ನು ಬಿಟ್ಟಿದ್ದು, ದೇಹದಲ್ಲಿ ಅನಗತ್ಯ ವಸ್ತುಗಳನ್ನು ಹೊರಹಾಕಲು ನೀರು ಸಹಾಯವಾಗುತ್ತದೆ’ ಎಂದು ಸಲಹೆ ನೀಡಿದರು.
ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಕವಿ ಇಂತಹದ್ದೇ ವಿಷಯ ಎನ್ನದೇ ಎಲ್ಲವನ್ನೂ ಕವಿತೆಗಳ ರೂಪದಲ್ಲಿ ಕಟ್ಟಿಕೊಡುವ ಕೆಲಸ ಮಾಡುತ್ತಾನೆ. ನೋಡುವುದು, ಅನುಭವಿಸುವುದು ಕಾವ್ಯದ ರೂಪದಲ್ಲಿ ಬಂದರೆ, ಕಾದಂಬರಿ, ಕಾವ್ಯ, ಕಥೆ ಹೇಗಿರಬೇಕೆನ್ನುವುದನ್ನು ನಾವು ಸಾಹಿತ್ಯದಲ್ಲಿ ನೋಡುತ್ತಿದ್ದೇವೆ. ನೀಗೂ ರಮೇಶ್ ಅವರು ಚಿಂತನೆಯಲ್ಲಿ ಬರೆಯುತ್ತಿರುವ ವ್ಯಕ್ತಿಯಾಗಿದ್ಧಾರೆ’ ಎಂದು ಶ್ಲಾಘಿಸಿದರು.
ಕೃತಿ ಕುರಿತು ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿದರು. ಪ್ರಕೃತಿ ಚಿಕಿತ್ಸಾ ಪ್ರಚಾರಕ ಕೆ.ಎಸ್.ಗಿರಿರಾಜು, ಪಾಸಿಟಿವ್ ತಮ್ಮಯ್ಯ ಅವರು ಆರೋಗ್ಯ ಸಂವಾದ ನಡೆಸಿಕೊಟ್ಟರು. ಮೈಷುಗರ್ ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ವೈ.ಸಿ. ಮನುಜಾಶ್ರೀ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಎಂಆರ್‌ಎಂ ಪ್ರಕಾಶನದ ಪ್ರಕಾಶಕ ಎಂ.ಆರ್.ಮಂಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ಪ್ರಕಾಶಕ ಎನ್.ಮಹೇಶ್‌ಕುಮಾರ್, ಸಹಜ ಕೃಷಿಕ ವೈ.ಸಿ.ಯೋಗೇಶ್ ಭಾಗವಹಸಿದ್ದರು.
ಕೃಷಿಕ ಎ.ಎಸ್.ಮಹೇಶ್ ಅವರಿಗೆ ಗಾಂಧಿ ಸ್ವಯಂ ಸ್ವಾಸ್ಥ್ಯ ಪುರಸ್ಕಾರ ನೀರನ್ನು ಯಥೇಚ್ಛವಾಗಿ ಕುಡಿಯಲು ಸಲಹೆ ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ, ಆರೋಗ್ಯ ಸಂವಾದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.