ಮಂಡ್ಯ: ನಗರ ವ್ಯಾಪ್ತಿಯ ಮತದಾರರಲ್ಲಿ ಕೆಲವರು ಸ್ವಂತ ಮನೆಯಿಲ್ಲವೆಂದು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಅರ್ಹರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ‘ನಾವು ದ್ರಾವಿಡ ಕನ್ನಡಿಗರು ಹೋರಾಟ ಸಮಿತಿ’ಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಮತ್ತು ನಗರದ ಕೆಇಬಿ ಕಾಲೊನಿ, ಬೀಡಿ ಕಾಲೊನಿಯ ನಿವೇಶನ ರಹಿತರು ಘೋಷಣೆ ಕೂಗಿದರು. ನಂತರ ಕಚೇರಿ ಸಹಾಯಕಿ ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು.
ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ಮನೆಯಿಲ್ಲದವರಿಗೆ ಮನೆ ಕೊಡಿಸಲು ಕಾರ್ಯಪ್ರವೃತ್ತರಾಗಿ, ಐದು ಸಾವಿರ ಮನೆಗಳಿಗೆ ಮಂಜೂರಾತಿ ಸಿಕ್ಕಿದೆ ಎಂದು ತಿಳಿಸಿದ್ದು, ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಸಂತ್ರಸ್ತರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಅರ್ಹ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ನಿವೇಶನ, ಮನೆ ವಿತರಿಸಬೇಕೆಂದರೆ ದತ್ತಾಂಶ ಕರಾರುವಕ್ಕಾಗಿ ಇರಬೇಕಿರುವುದರಿಂದ ತಾವು ಸಂಬಂಧಪಟ್ಟವರಿಗೆ ತಿಳಿಸಿ, ಕೂಡಲೇ ಸ್ವೀಕರಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಸಂತ್ರಸ್ತರ ಪಟ್ಟಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ಅಭಿ ಹನಕೆರೆ, ಮುಖಂಡರಾದ ತನ್ವೀರ್, ನಾಸಿರ್, ರಿಹಾನ್, ನೂರ್‌ಉಲ್ಲಾ, ಸಮೀಯಾ, ನಗೀನಾ, ನಬೀನಾ, ಆರ್.ಸಿಮ್ರಾನ್, ಎಸ್.ನಂದಿನಿ, ಡಿ.ಎಸ್.ಸವಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.