ADVERTISEMENT

ಸಾವಯವ ಹೆಸರಿನಲ್ಲಿ ರಾಸಾಯನಿಕಭರಿತ ಬೆಲ್ಲ: ಗುಣಮಟ್ಟ ಪರಿಶೀಲನೆ ವ್ಯವಸ್ಥೆಯೇ ಇಲ್ಲ

ಸಾವಯವ ಹೆಸರಿನಲ್ಲಿ ಮಾರಾಟ

ಎಂ.ಎನ್.ಯೋಗೇಶ್‌
Published 17 ಮಾರ್ಚ್ 2021, 6:02 IST
Last Updated 17 ಮಾರ್ಚ್ 2021, 6:02 IST
ಆಲೆಮನೆಯೊಂದರಲ್ಲಿ ಚಿನ್ನದಂತಹ ಹೊಳಪಿನ ಬೆಲ್ಲ ತೆಗೆಯುತ್ತಿರುವುದು
ಆಲೆಮನೆಯೊಂದರಲ್ಲಿ ಚಿನ್ನದಂತಹ ಹೊಳಪಿನ ಬೆಲ್ಲ ತೆಗೆಯುತ್ತಿರುವುದು   

ಮಂಡ್ಯ: ಆರೋಗ್ಯಕ್ಕೆ ಸಕ್ಕರೆಗಿಂತ ಬೆಲ್ಲ ಉತ್ತಮ ಎಂಬ ವೈದ್ಯರ ಸಲಹೆ ಮೇರೆಗೆ ಜನರಲ್ಲಿ ಬೆಲ್ಲದ ಬಳಕೆ ಹೆಚ್ಚುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ರಾಸಾಯನಿಕಯುಕ್ತ ಬೆಲ್ಲ ತುಂಬಿಹೋಗಿದ್ದು ಶುದ್ಧ ಬೆಲ್ಲ ಯಾವುದು ಎಂಬ ಗೊಂದಲ ಗ್ರಾಹಕರನ್ನು ಕಾಡುತ್ತಿದೆ.

ದಶಕದ ಹಿಂದೆ ಮಂಡ್ಯಕ್ಕೆ ಬಂದವರು ಇಲ್ಲಿಯ ಆಲೆಮನೆಗಳಿಗೆ ಭೇಟಿ ನೀಡಿ, ಶುದ್ಧ ಬೆಲ್ಲ ಖರೀದಿಸುತ್ತಿದ್ದರು. ನಗರದ ಚಿಲ್ಲರೆ ಅಂಗಡಿಗಳಲ್ಲಿ, ಸಹಕಾರ ಸಂಘಗಳ ಮಳಿಗೆಗಳಲ್ಲೂ ಆಲೆಮನೆ ಬೆಲ್ಲ ದೊರೆಯುತ್ತಿತ್ತು. ಅಚ್ಚು, ಕುರಿಕಾಲಚ್ಚು, ಬಾಕ್ಸ್‌, ಬಕೆಟ್‌ ಬೆಲ್ಲಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲೂ ಬೇಡಿಕೆ ಇತ್ತು.

ಆದರೆ ಇಲ್ಲಿಯ ಆಲೆಮನೆಗಳನ್ನು ಬಿಹಾರ, ಉತ್ತರ ಪ್ರದೇಶದವರಿಗೆ ಗುತ್ತಿಗೆ ನೀಡಿದ ನಂತರ ಬೆಲ್ಲವು ಅಶುದ್ಧಗೊಂಡಿದೆ. ಇದನ್ನು ಆಹಾರ ಸುರಕ್ಷತಾ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ‘ಮಂಡ್ಯ ಬೆಲ್ಲ’ದ ಹೆಸರು ಹಾಳಾಗಿದ್ದು ಯುಪಿ ಬೆಲ್ಲ, ಬಿಹಾರಿ ಬೆಲ್ಲ ಎಂಬ ಕುಖ್ಯಾತಿ ಪಡೆದುಕೊಂಡಿದೆ. ಬೆಲ್ಲಕ್ಕೆ ಚಿನ್ನದಂತಹ ಹೊಳಪು ನೀಡಲು ಸ್ಪರ್ಧೆಗೆ ಬಿದ್ದಿರುವ ಗುತ್ತಿಗೆದಾರರು, ಮಿತಿಮೀರಿ ರಾಸಾಯನಿಕ ಬಳಸುತ್ತಿದ್ದಾರೆ. ಹೀಗಾಗಿ ಗ್ರಾಹಕರು ಮಂಡ್ಯ ಬೆಲ್ಲ ಖರೀದಿಗೆ ಹಿಂದೇಟು ಹಾಕುವಂತಾಗಿದೆ.

ADVERTISEMENT

‘ಸಾವಯವ, ರಾಸಾಯನಿಕ ಮುಕ್ತ ಬೆಲ್ಲ ಎಂಬ ಹೆಸರಿನಲ್ಲಿ ಕಳಪೆ ಬೆಲ್ಲ ಮಾರಾಟವಾಗುತ್ತಿದ್ದು, ಶುದ್ಧ ಬೆಲ್ಲ ಖರೀದಿಸುವುದೇ ಗ್ರಾಹಕರಿಗೆ ಸವಾಲಾಗಿದೆ. ಕಪ್ಪಗಿರುವುದೆಲ್ಲಾ ಸಾವಯವ ಬೆಲ್ಲ ಎಂದು ಬಿಂಬಿಸಲಾಗುತ್ತಿದ್ದು ಸಾವಯವ ಮಾರಾಟ ಮಳಿಗೆಗಳಲ್ಲಿ ಇಡಲಾಗಿದೆ. ಅದರ ಗುಣಮಟ್ಟ ಪರಿಶೀಲಿಸುವ ವ್ಯವಸ್ಥೆ ಇಲ್ಲವಾಗಿದೆ’ ಎನ್ನುತ್ತಾರೆ ಜೈವಿಕ ಇಂಧನ ಸಂಶೋಧಕ ಡಾ.ಎಲ್‌.ಪ್ರಸನ್ನಕುಮಾರ್‌.

ಸದ್ಯ ಜಿಲ್ಲೆಯ ಆಲೆಮನೆಗಳಲ್ಲಿ ತಯಾರಾಗುತ್ತಿರುವ ಶೇ 99ರಷ್ಟು ಬೆಲ್ಲದಲ್ಲಿ ಫಾಸ್ಪರಿಕ್‌ ಆ್ಯಸಿಡ್‌, ಸಫೊಲೈಟ್‌, ಸೋಡಿಯಂ ಬೈಕಾರ್ಬೊನೇಟ್‌ (ಕೈಗಾರಿಕಾ ಬಳಕೆ), ಕ್ಯಾಲ್ಶಿಯಂ ಹೈಡ್ರಾಕ್ಸೈಡ್‌ ಕಂಡುಬಂದಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಬೆಲ್ಲವನ್ನು ಗಟ್ಟಿಗೊಳಿಸಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಬಳಸುತ್ತಿರುವುದು ಆತಂಕಕಾರಿಯಾಗಿದೆ.

‘ಸಕ್ಕರೆ ಕಾಯಿಲೆಯಿಂದ ರಕ್ಷಿಸಿಕೊಳ್ಳಲು, ಜನ ಬೆಲ್ಲಕ್ಕೆ ಬದಲಾಗುತ್ತಿದ್ದಾರೆ. ಆದರೆ ಬೆಲ್ಲಕ್ಕೆ ಸಕ್ಕರೆ ಬೆರೆಸಿ ಮತ್ತೆ ಸಕ್ಕರೆಯನ್ನೇ ತಿನ್ನಿಸುತ್ತಿದ್ದು ಜನರ ಆರೋಗ್ಯದ ಜೊತೆ ಚೆಲ್ಲಾಡುತ್ತಿದ್ದಾರೆ’ ಎಂಬುದು ಗ್ರಾಹಕರ ಆರೋಪ.

‘ಸಫೊಲೈಟ್‌, ಸೋಡಿಯಂ ಬೈಕಾರ್ಬೊನೇಟ್‌ ರಾಸಾಯನಿಕಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ. ಇದರ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲು ಶೇಖರಣೆಯಾಗಬಹುದು, ಅತಿಯಾದ ತಲೆನೋವು, ಮೂಳೆಗೆ ಪೋಷಕಾಂಶಗಳ ಕೊರತೆ ಉಂಟಾಗಬಹುದು’ ಎಂದು ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ ಅವರು ತಿಳಿಸಿದರು.

ಸಾವಯವ ಎನ್ನುವುದೇ ಸುಳ್ಳು!

‘ಸಾವಯವ ಕೃಷಿ ಪದ್ಧತಿ ಮೂಲಕ ಕಬ್ಬು ಬೆಳೆದರೆ ಮಾತ್ರ ಸಾವಯವ ಬೆಲ್ಲ ತಯಾರಿಸಬಹುದು. ಮಂಡ್ಯ ಜಿಲ್ಲೆಯಲ್ಲಿ ಎಲ್ಲೂ ಸಾವಯವ ಬೆಲ್ಲ ತಯಾರಾಗುತ್ತಿಲ್ಲ. ಸಾವಯವ ಬೆಲ್ಲ ಎಂಬುದೇ ಸುಳ್ಳು. ಸಾವಯವ ಬೆಲ್ಲ ಮಾರಾಟಕ್ಕೆ ಕೇಂದ್ರ ಸರ್ಕಾರದ ಎನ್‌ಪಿಒಪಿ (ನ್ಯಾಷನಲ್‌ ಪ್ರೋಗ್ರ್ಯಾಮ್‌ ಫಾರ್‌ ಅರ್ಗ್ಯಾನಿಕ್‌ ಪ್ರೊಡಕ್ಷನ್‌) ಪ್ರಮಾಣಪತ್ರ ಪಡೆಯಬೇಕು. ಆದರೆ ಜಿಲ್ಲೆಯಲ್ಲಿ ಯಾರೂ ಈ ಪ್ರಮಾಣಪತ್ರ ಪಡೆದಿಲ್ಲ’ ಎನ್ನುತ್ತಾರೆ ಆಹಾರ ಸುರಕ್ಷತಾ ಅಧಿಕಾರಿಗಳು.

* ನಾಲ್ಕು ದಿನಗಳಿಂದ 30ಕ್ಕೂ ಹೆಚ್ಚು ಆಲೆಮನೆಗಳ ಮೇಲೆ ದಾಳಿ ಮಾಡಿ ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಲ್ಲದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

-ಡಾ.ಬೆಟ್ಟಸ್ವಾಮಿ, ಜಿಲ್ಲಾ ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.