ADVERTISEMENT

ಜಾಗತೀಕರಣದಿಂದ ಕನ್ನಡ ನಾಡು–ನುಡಿಗೆ ಧಕ್ಕೆ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌

ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಕಳವಳ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:00 IST
Last Updated 1 ನವೆಂಬರ್ 2019, 16:00 IST
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಂಡ್ಯ: ‘ಜಾಗತೀಕರಣದ ಪ್ರಭಾವದಿಂದಾಗಿ 21ನೇ ಶತಮಾನದಲ್ಲಿ ಕನ್ನಡ ನಾಡು–ನುಡಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕನ್ನಡಾಭಿಮಾನ ಜನಜೀವನವನ್ನು ತುಂಬಿಕೊಳ್ಳುವವರೆಗೂ ಕನ್ನಡ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿಯಲಿವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಜ್ಞಾನ ಹಾಗೂ ತಂತ್ರಜ್ಞಾನ ಸಂಬಂಧಿ ಮಾಹಿತಿಗಳು ಕನ್ನಡಿಗರಿಗೆ ಕನ್ನಡದಲ್ಲೇ ದೊರೆಯುವಂತಾಗಬೇಕು. ಆರ್ಥಿಕವಾಗಿ ಕನ್ನಡಿಗರು ಮತ್ತಷ್ಟು ಬಲಿಷ್ಠಗೊಳ್ಳಬೇಕು. ನವೆಂಬರ್‌ ತಿಂಗಳಲ್ಲಿ ಮಾತ್ರ ನಾವು ಕನ್ನಡಿಗರಾಗದೇ ಪ್ರತಿ ಕ್ಷಣವೂ ಕನ್ನಡಿಗರಾಗಿ ಮಾತೃಭಾಷೆಯ ಕುರಿತು ಚಿಂತನೆ ನಡೆಸಬೇಕು. ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

ADVERTISEMENT

‘ಕನ್ನಡ ನಾಡು, ನುಡಿಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಅಷ್ಟು ವರ್ಷಗಳ ಹಿಂದೆಯೇ ಈ ನಾಡಿನಲ್ಲಿ ಕನ್ನಡ ಮಾತನಾಡುವವರು ಇದ್ದರು ಎಂದು ಶಾಸನಗಳಿಂದ ತಿಳಿದುಬರುತ್ತದೆ. ಕ್ರಿ.ಶ.450ರಲ್ಲಿ ದೊರೆತಿರುವ ಕನ್ನಡದ ಮೊಟ್ಟಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳು ಇರುವುದು ಕಂಡುಬಂದಿದೆ. ಕ್ರಿ.ಶ.850ರಲ್ಲಿ ರಚಿತವಾಗಿರುವ ಕನ್ನಡದ ಮೊದಲ ಕವಿರಾಜ ಮಾರ್ಗ ಕೃತಿಯಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ’ ಎಂದು ಹೇಳಿದರು.

‘ಕನ್ನಡದ ಮೊಟ್ಟಮೊದಲ ಮಿತ್ರವಿಂದ ಗೋವಿಂದ ನಾಟಕವನ್ನು ಶ್ರೀರಂಗಪಟ್ಟಣದ ಚಿಕ್ಕದೇವರಾಜ ಒಡೆಯರ್‌ ಆಸ್ಥಾನ ಕವಿ ಸಿಂಗರಾರ್ಯ ಅವರು ಬರೆದಿದ್ದಾರೆ. ಈ ಪರಂಪರೆಯನ್ನು ದೇಶಹಳ್ಳಿ ಶ್ರೀಕಂಠೇಗೌಡ, ಬಿಎಂಶ್ರೀ, ಪುತಿನ, ಎ.ಎನ್‌.ಮೂರ್ತಿರಾವ್‌, ಅಕ್ಕಿಹೆಬ್ಬಾಳಿನ ಕಲಾಮಂದಿರ ಸುಬ್ಬರಾಯರು, ವಿ.ಎಸ್‌.ಮೂರ್ತಿ, ಕೆ.ವಿ.ಶಂಕರಗೌಡ, ಸಿ.ಜಿ.ಕೃಷ್ಣಸ್ವಾಮಿ, ಹರವು ಯೋಗಾನರಸಿಂಹ, ಮಳವಳ್ಳಿ ಸುಬ್ಬಣ್ಣ, ಮಳವಳ್ಳಿ ಸುಂದರಮ್ಮ ಮುಂತಾದವರು ಮುಂದುವರಿಸಿಕೊಂಡು ಬಂದಿದ್ದಾರೆ’ ಎಂದರು.

‘ಮಂಡ್ಯ ಜಿಲ್ಲೆ ಕೃಷಿ ಆಧಾರಿತ ಜಿಲ್ಲೆಯಾಗಿದ್ದು ಅದರ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗಾಗಿ ಮುಂದೆಬರುವವರಿಗೆ ಉತ್ತೇಜನ ನೀಡಬೇಕಾದ ಅವಶ್ಯಕತೆ ಇದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದಲ್ಲಿ ಇದೂವರೆಗೆ 51 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 2,46,197 ಮಂದಿಯನ್ನು ಅರ್ಹ ಫಲಾನುಭವಿಗಳು ಎಂದು ಗುರುತಿಸಲಾಗಿದೆ. 1,02,213 ಅರ್ಹ ರೈತರ ಫಲಾನುಭವಿಗಳ ಖಾತೆಗೆ ಈಗಾಗಲೇ ಹಣ ಸಂದಾಯ ಮಾಡಲಾಗಿದೆ. ಉಳಿದ ರೈತರಿಗೆ ಶೀಘ್ರ ಹಣ ವರ್ಗಾವಣೆ ಮಾಡಲಾಗುವುದು’ ಎಂದರು.

‘ಸಂಧ್ಯಾ ಸುರಕ್ಷಾ ಯೋಜನೆಯಡಿ ಫಲಾನುಭಾವಿಗಳು ಪಡೆಯುತ್ತಿದ್ದ ₹ 600 ಮಾಸಾಶನವನ್ನು ₹ 1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದಕ್ಕಾಗಿ ₹ 660 ಕೋಟಿ ಹಣ ಒದಗಿಸಲಾಗಿದೆ. ಇದರಿಂದ 65 ವರ್ಷ ಮೀರಿದ 32.92 ಲಕ್ಷ ವೃದ್ಧರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 1,32,042 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದೆ ಎ.ಸುಮಲತಾ, ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಇದ್ದರು. ಇದೇ ಸಂದರ್ಭದಲ್ಲಿ 11 ಗಣ್ಯರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಮನ ಸೆಳೆದ ಮಕ್ಕಳ ಹೆಜ್ಜೆ

ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಯೋಜಿಸಲಾಗಿತ್ತು. ವಿವಿಧ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ವಿವಿಧ ಕನ್ನಡ ಗೀತೆಗಳಿಗೆ ಮಕ್ಕಳು ನೃತ್ಯ ಪ್ರದರ್ಶಿಸಿದರು.

ಆಕರ್ಷಕ ಪಥ ಸಂಚಲನದಲ್ಲಿ ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ತಾಯಿ ಭುವನೇಶ್ವರಿಯ ಸ್ತಬ್ಧಚಿತ್ರ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಸ್ತದ್ಧಚಿತ್ರ ಗಮನ ಸೆಳೆದವು. ಪೂಜಾಕುಣಿ, ವೀರಭದ್ರ ನೃತ್ಯಗಳು ಮೆರವಣಿಗೆಗೆ ರಂಗು ತಂದವು.

ಪಥಸಂಚಲನದಲ್ಲಿ ಬಹುಮಾನ ಗಳಿಸಿದ ತಂಡಗಳ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಟ್ರೋಫಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.