
ಮಂಡ್ಯ: ಬ್ಯಾಂಕಿನಲ್ಲಿ ಐದು ದಿನ ಕೆಲಸ ಮಾಡಲಷ್ಟೇ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಜಮಾವಣೆಗೊಂಡ ನೌಕರರು, ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಘೋಷಣೆ ಕೂಗಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವಾರವನ್ನು ಜಾರಿಗೊಳಿಸುವಂತೆ ಸರ್ಕಾರದಿಂದ ಅನುಮೋದನೆ ಪಡೆಯಲು ಮುಷ್ಕರ ನಡೆಯುತ್ತಿದೆ. ಇದನ್ನು ಬೆಂಬಲಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಡುವೆ 2023 ಡಿ.7ರಂದು ಸಹಿ ಮಾಡಲಾದ ಒಪ್ಪಂದ ಪತ್ರ ಹಾಗೂ 2024 ಮಾರ್ಚ್ 8ರಂದು ಹೊರಡಿಸಲಾದ ಜಂಟಿ ಟಿಪ್ಪಣಿಯಂತೆ ಎಲ್ಲ ಶನಿವಾರಗಳನ್ನು ಬ್ಯಾಂಕ್ ರಜಾ ದಿನಗಳಾಗಿ ಘೋಷಿಸುವಂತೆ ಶಿಫಾರಸು ಮಾಡಲಾಗಿದೆ. ಅದರಂತೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಹಣಕಾಸು ಕ್ಷೇತ್ರದಲ್ಲಿ ಈಗಾಗಲೇ ಆರ್‌ಬಿಐ, ಎಲ್‌ಐಸಿ ಹಾಗೂ ಜಿಐಸಿ ಸಂಸ್ಥೆಗಳು ಕೇಂದ್ರ ಸರ್ಕಾರ ಹಾಗೂ ಬಹುತೇಕ ರಾಜ್ಯ ಸರ್ಕಾರಗಳಂತೆ ದೀರ್ಘ ಕಾಲದಿಂದಲೇ ಐದು ದಿನಗಳ ಕೆಲಸದ ವಾರವನ್ನು ಅನುಸರಿಸುತ್ತಿವೆ. ಷೇರು ಮಾರುಕಟ್ಟೆಗಳು ಇದೇ ಮಾದರಿ ಅನುಸರಿಸುತ್ತಿವೆ. ಹಣದ ಮಾರುಕಟ್ಟೆ, ವಿದೇಶಿ ವಿನಿಮಯ ವ್ಯವಹಾರಗಳು ಶನಿವಾರ ಮತ್ತು ಭಾನುವಾರ ಮುಚ್ಚಿರುತ್ತವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ನೌಕರರಾದ ಪ್ರದೀಪ್, ವಿಜಯ್, ನಿತಿನ್, ನಾಗೇಶ್, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.