
ಮಂಡ್ಯ: ಸಂಕ್ರಾಂತಿ ಹಬ್ಬ ಎನ್ನುವುದು ಒಕ್ಕಲುತನದ ಧ್ಯೋತಕವಾಗಿದ್ದು, ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಹಾಗೂ ರಾಸುಗಳನ್ನೂ ಪೂಜಿಸಿ ದೇವರನ್ನು ಸ್ಮರಿಸುವ ಶುಭಸೂಚಕವಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ರೈತ ಸಭಾಂಗದ ಆವರಣದಲ್ಲಿ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್, ಚುಂಚಶ್ರೀ ಮಹಿಳಾ ವೇದಿಕೆ ಸಹಯೋಗದಲ್ಲಿ ಮಂಗಳವಾರ ನಡೆದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ರೈತ ತಾನು ಬೆಳೆದ ಭತ್ತ, ರಾಗಿ ರಾಶಿಯಲ್ಲಿ ತನಗೆ ನೆರವಾಗುವವರಿಗೆ ಮೊರದಲ್ಲಿ ತುಂಬಿಕೊಡುವ ದಾನಮಾಡುವ ಸಂಸ್ಕಾರವಿತ್ತು. ಆಧುನಿಕತೆಯಲ್ಲಿ ನಾಗರಿಕತೆ ಹೆಚ್ಚಾದಂತೆ, ಕಣದಲ್ಲಿ ಒಕ್ಕಣೆ, ರಾಶಿಪೂಜೆ, ಸಂಕ್ರಾಂತಿ ಸೊಗಡು, ಮನೆ ಜನರೆಲ್ಲಾ ತಾವು ವಾಸ ಮಾಡುವ ಸ್ಥಳದ ನೆರೆ ಹೊರೆಯವರ ಜೊತೆ ಹಬ್ಬ ಆಚರಿಸುವ ಸಂಭ್ರಮ ದಿನೇದಿನೇ ಕಡಿಮೆ ಆಗುತ್ತಿದೆ’ ಎಂದು ವಿಷಾದಿಸಿದರು.
ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ರವಿಕುಮಾರ್ ಮಾತನಾಡಿ, ‘ಮಂಡ್ಯದಲ್ಲಿ ನಡೆಯುತ್ತಿರುವ ಸಂಕ್ರಾಂತಿ ಸಂಭ್ರಮ ನೋಡಲು ರೋಮಾಂಚನವಾಗುತ್ತಿದೆ. ನಮ್ಮ ಸಂಪ್ರದಾಯ ಮತ್ತು ಸಂಸ್ಕಾರ ಉಳಿವಿಗಾಗಿ ಆಚರಿಸುತ್ತಿರುವ ಸಂಕ್ರಾಂತಿ ಸಂಭ್ರಮವನ್ನು ಮೈಸೂರಿನಲ್ಲಿ ಜ.16 ರಂದು ಮೊದಲ ಬಾರಿಗೆ ಮಾಡಲು ನಿರ್ದರಿಸಿದ್ದೇವೆ. ಒಟ್ಟಿನಲ್ಲಿ ಎಳ್ಳು–ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂಬುವ ಸಂದೇಶದೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸೋಣ’ ಎಂದರು.
ಆದಿ ಚುಂಚನಗಿರಿ ಮಠದ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ ಮಾತನಾಡಿದರು. ನಂತರ ಜೋಡಿ ಎತ್ತುಗಳಿಂದ ಕಿಚ್ಚು ಹಾಯಿಸಲಾಯಿತು. ದೇವಿಪೂಜೆ, ಗೋಪೂಜೆ, ರಾಶಿಪೂಜೆಗೆ ಜನರು ಮನಸೋತರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಸಿ.ರಮೇಶ್, ಮುಖಂಡರಾದ ಶೋಭಾ, ಶಕುಂತಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.