ಮಂಡ್ಯ: ಮಾನದಂಡಗಳನ್ನು ಉಲ್ಲಂಘಿಸಿ ಅನರ್ಹರು ಪಡೆದಿದ್ದ 7,088 ‘ಅಂತ್ಯೋದಯ’ ಮತ್ತು ‘ಬಿಪಿಎಲ್’ ಪಡಿತರ ಚೀಟಿಗಳನ್ನು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ‘ಎಪಿಎಲ್’ ಕಾರ್ಡ್‌ಗಳನ್ನಾಗಿ ಪರಿವರ್ತಿಸಿದ್ದಾರೆ.
ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯವನ್ನು ಸೆ.17ರಿಂದ ಕೈಗೊಂಡಿತ್ತು.
ಜಿಲ್ಲೆಯಲ್ಲಿ 690 ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು 6,398 ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್‌ಗಳು ಅನರ್ಹರ ಪಾಲಾಗಿದ್ದವು. ಇವುಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಈ ಎಲ್ಲ ಕಾರ್ಡ್‌ಗಳನ್ನು ಎಪಿಎಲ್ (ಆದ್ಯತಾ ರಹಿತ ಕುಟುಂಬ–ಎನ್‌ಪಿಎಚ್‌ಎಚ್) ಕಾರ್ಡ್‌ಗಳಿಗೆ ಪರಿವರ್ತಿಸಿದ್ದಾರೆ. ಈ 7,088 ಕಾರ್ಡ್‌ಗಳಿಗೆ ಸಂಬಂಧಿಸಿದಂತೆ 29,487 ಸದಸ್ಯರು ನಿಯಮ ಉಲ್ಲಂಘಿಸಿ ಸೌಲಭ್ಯ ಪಡೆದಿದ್ದರು.
93 ಕಾರ್ಡ್‌ಗಳು ರದ್ದು:
ಜಿಲ್ಲೆಯಲ್ಲಿ 82 ಅಂತ್ಯೋದಯ ಮತ್ತು 11 ಬಿಪಿಎಲ್ ಸೇರಿದಂತೆ ಒಟ್ಟು 93 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಈ ಕಾರ್ಡ್‌ಗಳು 150 ಸದಸ್ಯರನ್ನು ಹೊಂದಿದ್ದವು. ಜತೆಗೆ 47 ಕಾರ್ಡ್‌ಗಳನ್ನು ಡಿಲೀಟ್ ಮಾಡಲಾಗಿದೆ.
5.32 ಲಕ್ಷ ಕಾರ್ಡ್‌ಗಳು:
ಮಂಡ್ಯ ಜಿಲ್ಲೆಯಲ್ಲಿ 33,248 ಅಂತ್ಯೋದಯ ಕಾರ್ಡ್‌ಗಳು 1.36 ಲಕ್ಷ ಸದಸ್ಯರನ್ನು ಹಾಗೂ 65,776 ಎಪಿಎಲ್ ಕಾರ್ಡ್‌ಗಳು 2.25 ಲಕ್ಷ ಸದಸ್ಯರನ್ನು ಒಳಗೊಂಡಿವೆ. 4,33,596 ಬಿಪಿಎಲ್ ಕಾರ್ಡ್‌ಗಳಿದ್ದು, 14.16 ಲಕ್ಷ ಕುಟುಂಬ ಸದಸ್ಯರನ್ನು ಹೊಂದಿವೆ. ಒಟ್ಟು ಜಿಲ್ಲೆಯಲ್ಲಿ 5,32,620 ಕಾರ್ಡ್‌ಗಳಿದ್ದು, 17.77 ಲಕ್ಷ ಸದಸ್ಯರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 5,32,620 ಪಡಿತರ ಚೀಟಿಗಳಿವೆ 4.33 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ 33,248 ಅಂತ್ಯೋದಯ ಕಾರ್ಡ್‌ಗಳಿವೆ
ನಿಯಮ ಉಲ್ಲಂಘಿಸಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಪಡೆದಿದ್ದ ಅನರ್ಹರನ್ನು ಪತ್ತೆ ಹಚ್ಚಿದ್ದೇವೆ. ಅರ್ಹರ ಕಾರ್ಡ್ ರದ್ದಾಗಿದ್ದರೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಕ್ರಮವಹಿಸುತ್ತೇವೆಪ್ರತೀಕ್ ಜಿ. ಹೆಗ್ಡೆ ಉಪನಿರ್ದೇಶಕ ಆಹಾರ ಇಲಾಖೆ ಮಂಡ್ಯ
ಮಾನದಂಡಗಳೇನು?
ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಆದ್ಯತೇತರ ಕುಟುಂಬಗಳನ್ನು (ಎಪಿಎಲ್) ಗುರುತಿಸಲು ಪ್ರಸ್ತುತ ಇರುವ ಹೊರಗಿಡುವ ಮಾನದಂಡಗಳನ್ನು ಅನುಸರಿಸಲಾಗಿದೆ. ಅನರ್ಹರು ಪಡೆದಿದ್ದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಈ ಮಾನದಂಡಗಳ ಅನುಸಾರ ಪತ್ತೆ ಮಾಡಲಾಗಿದೆ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ದೆಗಳು ಮಂಡಳಿ ನಿಗಮ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ ಸೇವಾ ತೆರಿಗೆ ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು. ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್ ಮ್ಯಾಕ್ಸಿಕ್ಯಾಬ್ ಟ್ಯಾಕ್ಸಿ ಇತ್ಯಾದಿ ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲ ಕುಟುಂಬಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.