ADVERTISEMENT

ಮದ್ದೂರು | ರೇಣುಕಾ ಎಲ್ಲಮ್ಮ ಮುತ್ತಿನ ಪಲ್ಲಕ್ಕಿ ಉತ್ಸವ ಫೆ.5ರಂದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 12:51 IST
Last Updated 30 ಜನವರಿ 2023, 12:51 IST
ರೇಣುಕಾ ಎಲ್ಲಮ್ಮ ತಾಯಿ ವಿಗ್ರಹ
ರೇಣುಕಾ ಎಲ್ಲಮ್ಮ ತಾಯಿ ವಿಗ್ರಹ   

ಮದ್ದೂರು (ಮಂಡ್ಯ ಜಿಲ್ಲೆ): ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿ ಪಡೆದಿರುವ ಪಟ್ಟಣದ ಹೊಳೆಬೀದಿ ರೇಣುಕಾ ಎಲ್ಲಮ್ಮ ದೇವಿಯ 24ನೇ ಮಹಾಚಂಡಿಹೋಮ ಹಾಗೂ 51ನೇ ಜಾತ್ರಾ ಮಹೋತ್ಸವ ಫೆ.4ರಿಂದ ಆರಂಭಗೊಳ್ಳಲಿದೆ, ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ಫೆ.5ರಂದು ನಡೆಯಲಿದೆ.

ಫೆ.4ರಂದು ಸಂಜೆ 6 ಗಂಟೆಗೆ ಮೂಲದೇವರ ಅನುಜ್ಞೆ, ಭೂಶಾಂತಿ, ಗಣಪತಿ ಪೂಜೆ, ಗಂಗಾಪೂಜೆ, ಸ್ವಸ್ತಿವಾಚನ, ಪಂಚಗವ್ಯಾರಾಧನೆ, ದೇವನಾಂದಿ, ಋತ್ವಿಕ್‌ ವರ್ಣನೆ, ಕ್ಷೇತ್ರಪಾಲ ವಾಸ್ತೋಷ್ಪತಿ, ಕಳಶ ಸ್ಥಾಪನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.

ಫೆ.5ರಂದು ಬೆಳಿಗ್ಗೆ 7.05ಕ್ಕೆ ಮಹಾಚಂಡಿಕಾ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ತಂಬಿಟ್ಟಿನ ಆರತಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಆರಂಭಗೊಳ್ಳಲಿದೆ.

ADVERTISEMENT

ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ದೇವಿಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಅಮ್ಮನವರ ಉಯ್ಯಾಲೆ ಉತ್ಸವ ಏರ್ಪಡಿಸಲಾಗಿದೆ. ರಾತ್ರಿ 8.30ಕ್ಕೆ ಸಿಂಹ ಲಗ್ನದಲ್ಲಿ ವಿವಿಧ ಪುಷ್ಪಗಳ ಅಲಂಕಾರದೊಂದಿಗೆ ಎಲ್ಲಮ್ಮ ದೇವಿಯ ವಿಗ್ರಹವನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುವುದು.

ಪಲ್ಲಕ್ಕಿ ಮೆರವಣಿಗೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್‌ ಸೆಟ್‌ ಪ್ರಮುಖ ಆಕರ್ಷಣೆಯಾಗಿರಲಿದೆ. ಜೊತೆಗೆ ಮದ್ದೂರಮ್ಮ ಪೂಜಾ ಕುಣಿತ, ಸ್ಥಳೀಯ ಕಲಾವಿದರ ತಮಟೆ, ನಗಾರಿ ಹಾಗೂ ಜಾನಪದ ಮೇಳ ನಡೆಯಲಿದೆ.

ಫೆ.6ರಂದು ಬೆಳಿಗ್ಗೆ 6 ಗಂಟೆಗೆ ದೇವಿಯನ್ನು ದೇವಾಲಯದ ಮೂಲಸ್ಥಾನಕ್ಕೆ ಆಹ್ವಾನಿಸಲಾಗುವುದು. ನಂತರ ಪಂಚಗವ್ಯಾರಾಧನೆ, ಪುಣ್ಯಾಹವಾಚನ, ಕ್ಷೀರಾಭಿಷೇಕದ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು ಎಂದು ರೇಣುಕಾ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.