ಮಂಡ್ಯ: ಸಾರ್ವಜನಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟ ತಿಳಿಯಲು ಸೆ.22 ರಿಂದ ಜಿಲ್ಲೆಯಲ್ಲಿ ಸಮೀಕ್ಷೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಜಿಲ್ಲಾಡಳಿತದ ಸಹಯೋಗದಲ್ಲಿ ಸೋಮವಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಜಿಲ್ಲಾ ಹಂತದ ಮಾಸ್ಟರ್ ಟ್ರೈನರ್ಸ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಸದರಿ ಸಮೀಕ್ಷೆಯನ್ನು ಯಾವುದೇ ಜಾತಿ, ಧರ್ಮ ಹಾಗೂ ಮತ ತಿಳಿದಿಕೊಳ್ಳಲು ನಡೆಸುತ್ತಿಲ್ಲ. ಪ್ರತಿಯೊಬ್ಬ ನಾಗರಿಕರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮಟ್ಟದ ದತ್ತಾಂಶವನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಸಮೀಕ್ಷೆ ಪರಿಣಾಮಕಾರಿಯಾಗಿ ನಡೆಸಲು ಸದರಿ ಕಾರ್ಯಾಗಾರ ನಡೆಸುತ್ತಿದ್ದು, ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಸ್ ಇದರ ಸದುಪಯೋಗ ಪಡೆದುಕೊಂಡು ಸಮೀಕ್ಷೆ ಯಶಸ್ವಿಗೊಳಿಸಬೇಕಿದೆ. ಸಮೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಕೈಗೊಳ್ಳುವುದರಿಂದ ಯಾವುದೇ ಸಮಸ್ಯೆ ಉಂಟಾಗದಂತೆ ಗಣತಿದಾರರು ನೋಡಿಕೊಳ್ಳಬೇಕು. ಯಾವ ರೀತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಾರೋ ಅದೇ ರೀತಿಯಲ್ಲಿ ಅಚ್ಚುಕಟ್ಟಾಗಿ ಸಮೀಕ್ಷೆದಾರರಿಗೆ ತರಬೇತಿ ನೀಡಿ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸಮೀಕ್ಷೆ ವೇಳೆ ಯಾವುದೇ ಕಾರಣಕ್ಕೂ ಅಪ್ರಾಪ್ತರಿಂದ ಮಾಹಿತಿ ಸಂಗ್ರಹಣೆ ಮಾಡುವಂತಿಲ್ಲ, ರಾಜ್ಯ ಹಂತದ ಮಾಸ್ಟರ್ ಟ್ರೈನರ್ಸ್‌ನಿಂದ ತರಬೇತಿ ಪಡೆದ ಜಿಲ್ಲಾ ಹಂತದ ಮಾಸ್ಟರ್ ಟ್ರೈನರ್ಸ್ ಗಣತಿದಾರರಿಗೆ ತರಬೇತಿ ನೀಡುತ್ತಾರೆ. ಹಂತ ಹಂತವಾಗಿ ತರಬೇತಿ ನೀಡುವುದರಿಂದ ಮಾಹಿತಿ ರವಾನೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿರುತ್ತದೆ. ಗಣತಿದಾರರು ಪ್ರತಿ ಹಂತದ ತರಬೇತಿಯಲ್ಲಿ ಯಾವುದೇ ಅನುಮಾನ, ಗೊಂದಲವಿದ್ದರೆ ಅದನ್ನು ಮಾಸ್ಟರ್ ಟ್ರೈನರ್ಸ್ ಬಳಿ ಕೇಳಿ ತಿಳಿದುಕೊಂಡು ಸಮೀಕ್ಷೆ ನಡೆಸಿ ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಜಿ.ಪಂ.ಸಿಇಒ ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ತಹಶೀಲ್ದಾರ್ ವಿಶ್ವನಾಥ್, ಮುಡಾ ಆಯುಕ್ತ ಕೃಷ್ಣಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.