ADVERTISEMENT

ರೈತನ ಅಣಕು ಆತ್ಮಹತ್ಯೆ; ಆಕ್ರೋಶ

ಬಹಿರಂಗ ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ ರೈತರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 11:24 IST
Last Updated 14 ಅಕ್ಟೋಬರ್ 2019, 11:24 IST
ಮಂಡ್ಯ ನಗರದಲ್ಲಿ ಭಾನುವಾರ ಹಾದು ಹೋದ ವಾಹನ ಜಾಥಾದಲ್ಲಿ ರೈತರೊಬ್ಬರು ಆತ್ಮಹತ್ಯೆ ಅಣಕು ಪ್ರದರ್ಶನ ನೀಡಿದರು
ಮಂಡ್ಯ ನಗರದಲ್ಲಿ ಭಾನುವಾರ ಹಾದು ಹೋದ ವಾಹನ ಜಾಥಾದಲ್ಲಿ ರೈತರೊಬ್ಬರು ಆತ್ಮಹತ್ಯೆ ಅಣಕು ಪ್ರದರ್ಶನ ನೀಡಿದರು   

ಮಂಡ್ಯ: ರೈತರ ಹಾಗೂ ರಾಜ್ಯ ನೆರೆ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯಉದ್ಯಾನವನದಲ್ಲಿ ನಡೆಯುವ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ 200ಕ್ಕೂ ಹೆಚ್ಚು ರೈತರು ಭಾನುವಾರ ತೆರಳಿದರು.

ಪ್ರವಾಹ ಪೀಡಿತ ಮತ್ತು ಅಕಾಲಿಕ ಮಳೆ ಪ್ರದೇಶಕ್ಕೆ ಹಾಗೂ ಬರ ನಿರ್ವಹಣೆಗೆ ನಿರ್ಲಕ್ಷ್ಯ ಧೋರಣೆ ತಾಳಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ತಲಕಾವೇರಿಯಿಂದ–ಬೆಂಗಳೂರಿಗೆ ವಾಹನ ಜಾಥಾ ಭಾನುವಾರ ರಾಷ್ಟ್ರೀಯ ಹೆದ್ದಾರಿಯ ವಿ.ಸಿ.ಫಾರಂ ಗೇಟ್‌ ಬಳಿ ಆಗಮಿಸಿತು. ಮಂಡ್ಯ ರೈತರು ಅವರೊಂದಿಗೆ ಸೇರಿ, ನಗರಕ್ಕೆ ಆಗಮಿಸಿ ಜಯಚಾಮರಾಜೇಂದ್ರ ವೃತ್ತದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

ತಲಕಾವೇರಿ ಸೇರಿದಂತೆ ವಿವಿಧೆಡೆಯಿಂದ 800 ಕ್ಕೂ ಹೆಚ್ಚು ರೈತರು, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು. ಮಂಡ್ಯದ ಮೈಷುಗರ್‌ ಹೈಸ್ಕೂಲ್ ಆವರಣದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ ಬೆಂಗಳೂರು ಕಡೆಗೆ ರೈತರು ಪ್ರಯಾಣ ಮುಂದುವರೆಸಿದರು.

ADVERTISEMENT

ರೈತರ ಸಮಸ್ಯೆ ಪ್ರತಿಬಿಂಬಿಸಿದ ಅಣಕು ರೈತ ಆತ್ಮಹತ್ಯೆ: ಸಕ್ಕರೆ ನಾಡಿನ ರೈತರ ಸಮಸ್ಯೆ ಪ್ರತಿಬಿಂಬಿಸುಂತಹ ರೈತರ ಆತ್ಮಹತ್ಯೆ ಅಣಕು ಪ್ರದರ್ಶನ ನೋಡುಗರ ಕರುಳು ಹಿಂಡುವಂತೆ ಮಾಡಿತ್ತು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಧೋಗತಿಯಿಂದ ರೈತರು ಅನುಭವಿಸುತ್ತಿರು ಕಷ್ಟಗಳು, ಜಿಲ್ಲಾಡಳಿ ತ, ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದೆ ರೈತರು ಸಾಲದಿಂದ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದನ್ನು ಪ್ರತಿಬಿಂಬಿಸಿತು.

ರೈತರ ಟ್ರಾಕ್ಟರ್‌ ಒಂದರಲ್ಲಿ ಎರಡು ಕಡೆ ಒಣಗಿದ ಕಬ್ಬಿನಿಂದ ಮಾಡಿದ್ದ ಕಂಬಗಳಲ್ಲಿನ ಮರಕ್ಕೆ ಕಟ್ಟಿದ ಹಗ್ಗಕ್ಕೆ ರೈತರೊಬ್ಬರು ಕೊರಳೊಡ್ಡಿ ಆತ್ಮಹತ್ಯೆಗೆ ಹತ್ನಿಸಿದ ಅಣಕು ಪ್ರದರ್ಶನ ನೋಡುಗರ ಕರಳು ಕಿವುಚುವುದರೊಂದಿಗೆ ಜಿಲ್ಲೆಯ ರೈತರ ಸಮಸ್ಯೆಗಳನ್ನು ಅನಾವರಣ ಮಾಡಿತ್ತು. ಅಲ್ಲದೆ ಅನ್ನ ನೀಡುವ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿತು.

ಮಡಿಕೇರಿ, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು.

ಮಧ್ಯಾಹ್ನ ಕೆಲಕಾಲ ತುಂತುರು ಮಳೆ ಸುರಿಯಿತು. ಈ ಮಧ್ಯೆ ಮಳೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ ರೈತರ ವಾಹನ ಜಾಥ ಒಂದೆಡೆಯಾದರೆ, ಮತ್ತೊಂದೆಡೆ ಮೈಸೂರು, ಬೆಂಗಳೂರು ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ರಾಮಕೃಷ್ಣಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮನು ಸೋಮಯ್ಯ, ಮುಖಂಡರಾದ ಲತಾ ಶಂಕರ್, ಪಣಕನಹಳ್ಳಿ ನಾಗಣ್ಣ ಸೇರಿದಂತೆ ನೂರಾರು ರೈತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.