ADVERTISEMENT

ಮಂಡ್ಯ ವಿಧಾನ ಪರಿಷತ್‌ ಚುನಾವಣೆ: ಹಾಲಿ, ಮಾಜಿ ಸಿ.ಎಂ ಆಪ್ತರಲ್ಲಿ ಟಿಕೆಟ್‌ ಪೈಪೋಟಿ

ಎಂ.ಎನ್.ಯೋಗೇಶ್‌
Published 15 ನವೆಂಬರ್ 2021, 19:39 IST
Last Updated 15 ನವೆಂಬರ್ 2021, 19:39 IST
ಎಲೆಚಾಕನಹಳ್ಳಿ ಬಸವರಾಜ
ಎಲೆಚಾಕನಹಳ್ಳಿ ಬಸವರಾಜ   

ಮಂಡ್ಯ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಪ್ತರ ನಡುವೆ ಪೈಪೋಟಿ ತೀವ್ರಗೊಂಡಿದೆ.

ಕೆ.ಆರ್‌.ಪೇಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಆ ಪಕ್ಷದ ಮುಖಂಡರಲ್ಲಿ ಉತ್ಸಾಹ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲಿ ಇತರ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ, ಅನ್ಯ ಪಕ್ಷಗಳಿಂದ ಮುಖಂಡರನ್ನು ಕರೆತಂದು ಅಭ್ಯರ್ಥಿಯನ್ನಾಗಿಸುವ ಪರಿಪಾಠವಿತ್ತು. ಆದರೆ ಈ ಬಾರಿ ನಾಲ್ಕಕ್ಕೂ ಹೆಚ್ಚು ಮಂದಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.

ಅವರ ಪೈಕಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಎಲೆಚಾಕನಹಳ್ಳಿ ಬಸವರಾಜು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಬಂಧಿ ಬೂಕಹಳ್ಳಿ ಮಂಜು ಸೇರಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ದೊರೆಯುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ADVERTISEMENT

60 ವರ್ಷದ ಬಸವರಾಜು ಎಸ್‌.ಆರ್‌.ಬೊಮ್ಮಾಯಿ ಶಿಷ್ಯ ವಲಯದಲ್ಲೂ ಗುರುತಿಸಿಕೊಂಡಿದ್ದವರು. ತಂದೆಯ ಮೂಲಕ ಮಗನಿಗೂ ಆಪ್ತರಾಗಿದ್ದಾರೆ. ಪತ್ನಿ, ಸಹೋದರ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದರು. ಸ್ಥಳೀಯ ಸಂಸ್ಥೆಗಳ ಮೇಲೆ ಅವರಿಗೆ ಹಿಡಿತವಿದೆ.

ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ಧಾಗ ಎಲೆಚಾಕನಹಳ್ಳಿ, ತೂಬಿನಕೆರೆ ಭಾಗಕ್ಕೆ ಕೆರೆ ತುಂಬಿಸುವ ಯೋಜನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಪ್ರಭಾವ ಬಳಸಿಕೊಂಡು ಟಿಕೆಟ್‌ಗೆ ಯತ್ನ ನಡೆಸಿದ್ದಾರೆ.

ಅವರ ಜೊತೆಗೆ ಕೆ.ಸಿ.ನಾರಾಯಣಗೌಡರ ಜೊತೆ ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಶೀಳನೆರೆ ಅಂಬರೀಷ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌ ಅವರೂ ಟಿಕೆಟ್‌ ಯತ್ನ ನಡೆಸುತ್ತಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರ ಸಂಬಂಧಿ ಮಂಜು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿದ್ದ ಅವರು ವಿದ್ಯುತ್‌ ಗುತ್ತಿಗೆದಾರರು. ಯುವ ನಾಯಕನಾಗಿ ಗುರುತಿಸಿಕೊಂಡಿರುವ ಅವರು ತಮ್ಮ ಪ್ರಭಾವ ಬಳಸುತ್ತಿದ್ದಾರೆ.

ಕ್ಷೇತ್ರ ಉಳಿಸಿಕೊಳ್ಳುವ ತವಕ: ಹಾಲಿ ಸದಸ್ಯ ಎನ್‌.ಅಪ್ಪಾಜಿಗೌಡ ಮತ್ತೆ 2ನೇ ಅವಧಿಗೆ ಸ್ಪರ್ಧಿಸುತ್ತಿದ್ದು ಜೆಡಿಎಸ್‌ನಲ್ಲಿ ಕ್ಷೇತ್ರ ಉಳಿಸಿಕೊಳ್ಳುವ ತವಕವಿದೆ. ಮಂಡ್ಯ ನಗರಸಭೆ ಸೇರಿ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಅಧಿಕಾರವಿದೆ. ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್‌ ಬೆಂಬಲಿಗರು ಅಧಿಕಾರದಲ್ಲಿದ್ದಾರೆ. ಅದು ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಜೆಡಿಎಸ್‌ ಲೆಕ್ಕಾಚಾರ.

ಕಾಂಗ್ರೆಸ್‌ನಲ್ಲಿ ಮಾಜಿ ಸದಸ್ಯ ಬಿ.ರಾಮಕೃಷ್ಣ ಹೆಸರು ಮುನ್ನೆಲೆಯಲ್ಲಿದೆ. ಅವರು ಜೆಡಿಎಸ್‌–ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿಯಾಗಿ ಒಮ್ಮೆ ಗೆಲವು ಸಾಧಿಸಿದ್ದರು. ಸ್ಥಳೀಯ ಕಾಂಗ್ರೆಸ್‌ ಮುಖಂಡರ ಬೆಂಬಲವೂ ಇರುವುದರಿಂದ ಅವರ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಅವರ ಜೊತೆಗೆ ಎಂ.ಪುಟ್ಟೇಗೌಡ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ.

***

ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕಮಲ ಅರಳಲಿದೆ. ಕೆ.ಆರ್‌.ಪೇಟೆ ಉಪ ಚುನಾವಣೆ ಮಾದರಿಯಲ್ಲಿ ಗೆಲುವಿಗಾಗಿ ಸಂಘಟಿತ ಹೋರಾಟ ನಡೆಸುವೆ

–ಎಲೆಚಾಕನಹಳ್ಳಿ ಬಸವರಾಜು

***

ನನಗೆ ಟಿಕೆಟ್‌ ದೊರೆಯುವ ಭರವಸೆ ಇದೆ. ಮುಖಂಡರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗಾಗಿ ಹೋರಾಟ ನಡೆಸುವೆ

–ಬೂಕಹಳ್ಳಿ ಮಂಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.