ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಚಾಲ್ತಿಯಲ್ಲಿದ್ದ ಬಿ.ಎ. ಹಾನರ್ಸ್ (ಬ್ಯಾಚುರಲ್ ಆಫ್ ಬಿಸಿನೆಸ್ ಎಕನಾಮಿಕ್ಸ್) ಕೋರ್ಸ್ ಅನ್ನು ಮುಚ್ಚಿದ್ದು, ಪ್ರಸ್ತುತ ವರ್ಷದ ಸಾಲಿನಿಂದ ಮತ್ತೆ ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕುಲಪತಿ ಕೆ.ಶಿವಚಿತ್ತಪ್ಪ ಅವರಿಗೆ ಮಂಗಳವಾರ ಮನವಿ ನೀಡಿದರು.
ಮಂಡ್ಯ ವಿವಿ ಆರಂಭವಾದಾಗಿನಿಂದಲೂ ಬಡವರ, ರೈತರ, ಕಾರ್ಮಿಕರ ಹಾಗೂ ಹಿಂದುಳಿದ ಸಮುದಾಯದ ಮಕ್ಕಳು ಸದರಿ ವಿವಿಯಲ್ಲಿ ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬಿ.ಎ.ಹಾನರ್ಸ್ ಕೋರ್ಸ್ ಅನ್ನು 2017ರಲ್ಲಿ ಸರ್ಕಾರದ ಅನುಮತಿಯೊಂದಿಗೆ ಆರಂಭಿಸಲಾಯಿತು. ಅಂದಿನ ಕುಲಸಚಿವರ ವೈಯಕ್ತಿಕ ಪ‍್ರತಿಷ್ಠೆಯಿಂದ ಮುಚ್ಚಲಾಗಿದೆ ಎಂದು ಆರೋಪಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೋರ್ಸ್‌ಗೆ ಪ್ರವೇಶ ಪಡೆದು ಉನ್ನತ ಶಿಕ್ಷಣದ ಅನುಕೂಲತೆಯನ್ನು ಪಡೆಯುವ ನಿಟ್ಟಿನಲ್ಲಿ ನಾವುಗಳು ಸಹ ಕೈ ಜೋಡಿಸುತ್ತಿದ್ದು, ಇದಕ್ಕೆ ಪೂರಕವಾಗಿ ಮಂಡ್ಯ ವಿವಿಯ ಸದರಿ ಕೋರ್ಸ್ ಅನ್ನು ಪ್ರಸಕ್ತ ಸಾಲಿನಿಂದ ಮರು ಆರಂಭಿಸಬೇಕು. ಜೊತೆಗೆ ವಿದ್ಯಾರ್ಥಿಗಳು ಪ್ರವೇಶಾತಿ ಸಂಖ್ಯೆಯನ್ನು 60ಕ್ಕೆ ಹೆಚ್ಚಳ ಮಾಡಬೇಕು. ಗರಿಷ್ಠ ಪ್ರವೇಶಾತಿ ಎಂಬುದನ್ನು ಮಿತಿಗೊಳಿಸಬಾರದು ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ, ಮುಖಂಡರಾದ ಬಿ.ಕೆ. ಸತೀಶ್, ವೆಂಕಟೇಶ್, ಜೋಸೆಫ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.