ADVERTISEMENT

ಕುಡಿಯುವ ನೀರಿಗೆ ಅಡ್ಡಿ ಮಾಡಿದರೆ ಹೋರಾಟ

ನಾಗಮಂಗಲ ತಾಲ್ಲೂಕಿಗೆ ಮಾರ್ಕೋನಹಳ್ಳಿ ಜಲಾಶಯದ ನೀರು ಬರಲೇಬೇಕು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 12:02 IST
Last Updated 23 ಅಕ್ಟೋಬರ್ 2019, 12:02 IST
ಎಲ್‌.ಆರ್‌.ಶಿವರಾಮೇಗೌಡ
ಎಲ್‌.ಆರ್‌.ಶಿವರಾಮೇಗೌಡ   

ಮಂಡ್ಯ: ‘ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ತಕರಾರು ಸರಿಯಲ್ಲ. ನಾವು ಜಮೀನಿಗೆ ಹರಿಸಿಕೊಳ್ಳಲು ನೀರು ಕೇಳುತ್ತಿಲ್ಲ, ಕುಡಿಯುವ ನೀರು ಕೊಡುವುದಿಲ್ಲ ಎಂದರೆ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಹೋರಾಟ ರೂಪಿಸುತ್ತೇವೆ’ ಎಂದು ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಬುಧವಾರ ಎಚ್ಚರಿಕೆ ನೀಡಿದರು.

‘ತಮಿಳುನಾಡಿನಲ್ಲಿ ನೀರಿನ ಕೊರತೆ ಎದುರಾದಾಗ ನಾವು ನೀರು ಕೊಡುತ್ತೇವೆ. ಆದರೆ ನಮ್ಮದೇ ಜಿಲ್ಲೆಯ ನಾಗಮಂಗಲದಲ್ಲಿ ಕುಡಿಯಲು ನೀರಿಲ್ಲ. ಕುಡಿಯುವ ನೀರಿನ ಕಾಮಗಾರಿ ತಡವಾಗಲು ಗುತ್ತಿಗೆದಾರನೇ ಕಾರಣ. ಆತನ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಜಲಾಶಯವನ್ನು ಮಹಾರಾಜರು ಕಟ್ಟಿಸಿದ್ದಾರೆ. ಇದು ನಾಗಮಂಗಲ ವ್ಯಾಪ್ತಿಯಲ್ಲಿಯೇ ಇದ್ದರೂ ಅದರ ಫಲವನ್ನು ಮಾತ್ರ ತುಮಕೂರಿನ ಜನ ಪಡೆಯುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದಿ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಆದಿಚುಂಚನಗಿರಿ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಪರವಾಗಿ ನೇತೃತ್ವ ವಹಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನಾನು ಶಾಸಕ ಸುರೇಶ್‌ಗೌಡ ಅವರ ವಿರುದ್ಧ ದೂರು ಹೇಳಲು ಬಂದಿಲ್ಲ. ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರಿಗೂ ತಿಳಿ ಹೇಳುತ್ತೇವೆ. ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟಕ್ಕೆ ಇಳಿಯಲಾಗುವುದು. ಈ ಕುರಿತು ಮೂರು ದಿನಗಳಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಲ ಮನ್ನಾ ಬಗ್ಗೆ ಬಿಡುಗಡೆ ಮಾಡಿರುವ ಪುಸ್ತಕವನ್ನು ಕೆ.ಆರ್‌.ಪೇಟೆ ತಾಲ್ಲೂಕಿನಾದ್ಯಂತ ಹಂಚಲಾಗುವುದು. ಯಾವ ಯಾವ ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ಖಾತರಿ ಮಾಡಿಕೊಳ್ಳಲು ಮನವಿ ಮಾಡುತ್ತೇವೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘ನಾಗಮಂಗಲ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇದನ್ನು ನೀಗಿಸಲು ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜಕಾರಣ ಮಾಡಬಾರದು. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಕುಡಿಯುವ ನೀರಿಗೆ ತೊಂದರೆ ಕೊಡುತ್ತಿರುವ ರಂಗನಾಥ್‌ ಅವರ ಕಣ್ಣು ತೆರೆಸುವ ಕೆಲಸ ಮಾಡಲಾಗುವುದು. ಸ್ವಾಮೀಜಿ ಅವರ ಮಧ್ಯಸ್ಥಿಕೆಯಲ್ಲಿ ಮೊದಲು ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇವೆ. ಬಗೆಹರಿಯದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಸರಿಯಲ್ಲ. ಹೈನುಗಾರಿಕೆಯಿಂದ ರೈತರಿಗೆ ನಿಶ್ಚಿತ ಆದಾಯ ಬರುತ್ತಿದೆ. ಕೇಂದ್ರ ಸರ್ಕಾರ ಬೇರೆ ದೇಶಗಳಿಂದ ಹಾಲು, ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಮುಂದಾಗುತ್ತಿರುವುದು ಖಂಡನೀಯ’ ಎಂದರು.

ಕುಣಿಗಲ್‌ ಶಾಸಕನ ಸಂಬಂಧ ಲೆಕ್ಕಕ್ಕಿಲ್ಲ

‘ಕುಣಿಗಲ್‌ ಶಾಸಕ ಹಾಗೂ ನಾನು ಸಂಬಂಧಿಕರಾದರೂ ತಾಲ್ಲೂಕಿನ ವಿಚಾರಕ್ಕೆ ಬಂದರೆ ಸಂಬಂಧವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಮೊದಲು ತಾಲ್ಲೂಕು ಹಿತವೇ ಮುಖ್ಯ’ಎಂದು ಶಿವರಾಮೇಗೌಡ ಸ್ಪಷ್ಟಪಡಿಸಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಲ್ಲಿ ಇದ್ದರೂ ರಾಜ್ಯದ ನೆರೆ ಸಂತ್ರಸ್ತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿವೆ. ಮನೆ ಕಳೆದುಕೊಂಡು ಜನರು ಬೀದಿಗೆ ಬಿದ್ದಿದ್ದಾರೆ. ಮಧ್ಯಂತರ ಪರಿಹಾರ ಎಂದು ₹1,200ಕೋಟಿ ಬಿಡುಗಡೆ ಮಾಡಲಾಗಿದೆ ಎನ್ನುತ್ತಾರೆ. ಆದರೆ ಜನರು ತಿನ್ನಲು ಅನ್ನ, ವಾಸಿಸಲು ಮನೆ ಇಲ್ಲದೆ ನಿತ್ಯ ಪರದಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.