ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದ ರೈತರೊಬ್ಬರು ಎರಡು ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಚೆಂಡು ಹೂವು ಬೆಳೆದಿದ್ದು, ಬಂಪರ್ ಬೆಳೆ ತೆಗೆದಿದ್ದಾರೆ.
ಗ್ರಾಮದ ಎ.ಎಸ್. ಸಿದ್ದರಾಜು ಅವರು ಕಳೆ ಮುಕ್ತ ಬೇಸಾಯ ಪದ್ಧತಿಯಲ್ಲಿ ಎರಡು ತಳಿಯ ಚೆಂಡು ಹೂ ಬೆಳೆದಿದ್ದಾರೆ. ಲಕ್ಷ್ಮಿ ಇನ್‌ಫ್ಯಾಕ್ಟ್ (ಎಲ್ಲೋ ಕಿಂಗ್) ಮತ್ತು ಆರಾಧ್ಯ (ಕೆಂಪು) ತಳಿಯ ಚೆಂಡು ಹೂ ಬೆಳೆದಿದ್ದು, ಒಂದು ಕೊಯ್ಲಿಗೆ ಒಂದು ಟನ್ ವರೆಗೂ ಹೂವು ಸಿಗುತ್ತಿದೆ. ಹೂವಿನ ಗಿಡ 6 ಅಡಿ ಎತ್ತರದ ವರೆಗೂ ಬೆಳೆದಿದ್ದು ಉತ್ತಮ ಬೆಳೆ ಬಂದಿದೆ. ವಾರಕ್ಕೆ ಒಮ್ಮೆ ಹೂವು ಕೊಯ್ಯುತ್ತಿದ್ದು ಬೆಂಗಳೂರು ಮತ್ತು ಮೈಸೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಬಣ್ಣ ಮತ್ತು ಸುವಾಸಿತ ದ್ರವ್ಯ ಉತ್ಪಾದನೆ ಕಾರ್ಖಾನೆಗಳಿಗೂ ಹೂವು ಮಾರಾಟ ಮಾಡಿದ್ದಾರೆ.
ಅಂತರ ಬೆಳೆ: ಚೆಂಡು ಹೂವಿನ ಗಿಡದ ಜತೆಗೆ ಅಂತರ ಬೆಳೆಯಾಗಿ ಬಗೆ ಬಗೆಯ ಸೊಪ್ಪು ಬೆಳೆದಿದ್ದರು. ಪಾಲಕ್, ಮೆಂತೆ, ಸಬ್ಬಸಿಗೆ ಮತ್ತು ಕೊತ್ತಂಬರಿ ಸೊಪ್ಪು ಬೆಳೆದು ಮಾರಾಟ ಮಾಡಿದ್ದರು. ಚೆಂಡು ಹೂವಿನ ಮಧ್ಯೆ ಅಂತರ ಬೆಳೆಯಾಗಿ ಸೊಪ್ಪು ಬೆಳೆದಿದ್ದರಿಂದ ಕಳೆ ನಿಯಂತ್ರಣವಾಗಿದೆ. ಹೂವಿನ ಗಿಡಕ್ಕೆ ಸಾಕಷ್ಟು ಪೋಷಕಾಂಶ ಕೂಡ ಸಿಕ್ಕಿದ್ದು ಹುಲುಸಾಗಿ ಬೆಳೆದಿದೆ.
ಇದಕ್ಕೂ ಮುನ್ನ ಇದೇ ಜಮೀನಿನಲ್ಲಿ ತ್ರಿವಳಿ ಬೇಸಾಯ ಪದ್ಧತಿ ಅನುಸರಿಸಿ ಸಿದ್ದರಾಜು ಯಶಸ್ವಿಯಾಗಿದ್ದರು. ಅಂದರೆ, ಮೂರು ತಿಂಗಳಲ್ಲಿ ಮೂರು ಬೆಳೆ ತೆಗೆಯುವ ಪದ್ಧತಿ. ಈ ಪದ್ದತಿಯಲ್ಲಿ ಬೇಡಿಕೆ ಹೆಚ್ಚು ಇರುವ ವಿವಿಧ ಬಗೆ ಸೊಪ್ಪು ಬೆಳೆದು ಲಾಭ ಗಳಿಸಿದ್ದರು.
‘ಪೈರು ನಾಟಿ ಮಾಡಿದ 50 ದಿನಕ್ಕೆ ಚೆಂಡು ಹೂ ಕೊಯ್ಲಿಗೆ ಬಂದಿದೆ. ಇದುವರೆಗೆ ಎಂಟು ಕೊಯ್ಲು ತೆಗೆದಿದ್ದು ಸುಮಾರು ₹70 ಸಾವಿರ ಆದಾಯ ಬಂದಿದೆ. ಇನ್ನೂ ₹30 ಸಾವಿರ ಆದಾಯ ನಿರೀಕ್ಷಿಸಿದ್ದೇನೆ’ ಎಂಬುದು ಸಿದ್ದರಾಜು ಅವರ ಮಾತು. ಸಂಪರ್ಕಕ್ಕೆ ಮೊ:9741346732.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.